ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾಗಿ ಆ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ, ಇತ್ತೀಚೆಗೆ ಅದರ ಗೌರವಾಧ್ಯಕ್ಷರಾಗಿ ನಿಯುಕ್ತರಾದ ಬಸ್ತಿ ವಾಮನ ಶೆಣೈ ಇಂದು ನಿಧನರಾದರು. ನಮ್ಮ ಸಂಸ್ಥೆಯ ವಿದ್ಯಾಪೋಷಕ್ ವಿಭಾಗದ ಕಾರ್ಯಚಟುವಟಿಕೆ ಮೆಚ್ಚಿಕೊಂಡು ವಿಶೇಷ ರೀತಿಯಲ್ಲಿ ಪ್ರೋತ್ಸಾಹಿಸುತ್ತಾ ಬಂದಿದ್ದರು. ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ಅವರು ನಿವೃತ್ತಿಯ ಅನಂತರದ ತಮ್ಮ ಬದುಕನ್ನು ಸಮಾಜದ ಒಳಿತಿಗೆ ಸಮರ್ಪಿಸಿಕೊಂಡಿದ್ದರು. ಮುಖ್ಯವಾಗಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರ. ಸದಾ ಉತ್ಸಾಹದ ಚಿಲುಮೆಯಾಗಿ ಎಲ್ಲರಿಗೆ ಮಾದರಿಯಾಗಿದ್ದರು. ಅವರು ಇಬ್ಬರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬಸ್ತಿ ಅವರು ಬ್ಯಾಂಕಿಂಗ್ ವೃತ್ತಿ ಜೀವನದಿಂದ ನಿವೃತ್ತರಾದ ಬಳಿಕ ಸಂಪೂರ್ಣ ಕೊಂಕಣಿ ಸಾಹಿತ್ಯ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 1993ರಲ್ಲಿ ಬಸ್ತಿ ವಾಮನ ಶೆಣೈ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾದರು. ಕೊಂಕಣಿ ಅಕಾಡೆಮಿ ಸ್ಥಾಪನೆಗೆ ರಾಜ್ಯ ಸರಕಾರದ ಮೇಲೆ ಒತ್ತಡ ತಂದು, 1995ರಲ್ಲಿ ಅಕಾಡೆಮಿ ಸ್ಥಾಪಿಸುವಲ್ಲಿ ಯಶಸ್ವಿಯಾದರು.

