ಏಪ್ರಿಲ್ 24ರ ಭಾನುವಾರದಂದು, ಖ್ಯಾತ ಯಕ್ಷಗಾನ ವಿಮರ್ಶಕ, ಮೂಡಬಿದಿರೆಯ ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರಾದ, ಬಹುಮುಖ ಪ್ರತಿಭೆಯ ಮೂಡಬಿದ್ರಿಯ ಶ್ರೀ ಶಾಂತಾರಾಮ ಕುಡ್ವ ರವರಿಗೆ ಮಂಗಳೂರಿನಲ್ಲಿ ಗೌರವ ಸನ್ಮಾನ.
ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಸಾಂಸ್ಕ್ರತಿಕ ಕಾಶಿ ಮೂಡಬಿದ್ರಿಯ ಖ್ಯಾತ ಯಕ್ಷಗಾನಸಂಘಟಕ, ಕಲಾವಿದ,
ನಾಟಕ ರಚನಾಕಾರ, ಯಕ್ಷಗಾನ ವಿಮರ್ಶಕ, ಸಾಹಿತಿ ಶಾಂತಾರಾಮ ಕುಡ್ವಾ ರವರನ್ನು ಯಕ್ಷಗಾನ ಅರ್ಥದಾರಿ, ಪತ್ರಿಕಾ ಬರಹಗಾರ, ಸಂಘಟಕ, ಕೊಂಕಣಿ ಯಕ್ಷಗಾನ ಸಂಭಾಷಣೆಕಾರ, ರಚನೆಕಾರ, ಪಾತ್ರಧಾರಿ.. ಹೀಗೆ ಅವರ ಕಲಾ ಕ್ಷೇತ್ರದಲ್ಲಿನ ಸರ್ವಾಂಗೀಣ ಸಾಧನೆಗಾಗಿ ಇದೇ ದಿನಾಂಕ ಏಪ್ರಿಲ್ 24 ರ ಭಾನುವಾರದಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ ಶ್ರೀ ಕುಡ್ತೇರಿ ಮಹಾಮಾಯ ದೇವಸ್ಥಾನದಲ್ಲಿ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ದ ಆಶ್ರಯದಲ್ಲಿ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ತಾಳಮದ್ದಳೆ-ಸಂಸ್ಮರಣೆ, ಸಂಮಾನವು, ಮಂಗಳೂರಿನ ಶ್ರೀ ಕುಡ್ತೇರಿ ಮಹಾಮಾಯ ದೇವಸ್ಥಾನದ ವಠಾರದಲ್ಲಿ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ… ಶ್ರೀ ವಾಗೀಶ್ವರಿ ಶತಮಾನನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಎಂ ಕರುಣಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಮಹಾಮ್ಮಾಯೀ ಭಜನಾ ಮಂಡಳಿಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ , ಶ್ರೀ ಮಹಾಮ್ಮಾಯೀ ದೇವಸ್ಥಾನದ ಪ್ರಬಂಧಕರಾದ ಪಾಂಡುರಂಗ ಕಾಮತ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದು, ಗೌರವಾಧ್ಯಕ್ಷ, ಸಾಹಿತಿ ಪ್ರದೀಪ್ ಕುಮಾರ್ ಕಲ್ಕೂರ, ಕಲಾವಿದ, ಟಿ.ವಿ. ನಿರೂಪಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ಶ್ರೀನಾಥ್ ಎನ್ ಪ್ರಭು, ನಾಗೇಶ್ ಪ್ರಭು, ಶೋಭಾ ಐತಾಳ್, ಸಂಜಯ ಕುಮಾರ್ ರಾವ್, ಪ್ರಫುಲ್ಲಾ ನಾಯಕ್, ಶ್ರೀಮತಿ ನಿವೇದಿತಾ ಮುಂತಾದ ಘಟಾನುಘಟಿ ಗಣ್ಯರ ಪಾಲ್ಗೊಳ್ಳುವಿಕೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.
ಕೆಲ ಸಮಯದ ಹಿಂದಷ್ಟೇ ಶ್ರವಣಬೆಳಗೊಳದಲ್ಲಿ ಜೈನ ಮಠದ ಸ್ವಾಮಿಗಳಿಂದ ಕರ್ನಾಟಕ ಯಕ್ಷ ಸೇವಾ ರತ್ನ ಬಿರುದು ಪಡೆದಿದ್ದ ಶ್ರೀ ಶಾಂತರಾಮ ಕುಡ್ವ ರವರನ್ನು ಇದೀಗ ಮತ್ತೊಂದು ಗೌರವ ಅರಸಿ ಬಂದಿರುವುದು ಸಮಾಜ ಸದ್ದು ಗದ್ದಲವಿಲ್ಲದೇ ಅವರ ಸೇವೆಯನ್ನು ಗುರುತಿಸುತ್ತಿದೆ ಎಂಬುದು ಗಮನಾರ್ಹ ವಿಷಯ ಹಾಗೂ ಪ್ರಶಂಸನೀಯ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.
ಯಕ್ಷಗಾನ ಲೋಕದ ಯಾವುದೇ ತಿಟ್ಟು, ಅದು ಬಡಗಾಗಲಿ -ತೆಂಕಾಗಲಿ – ಬಡಾ ಬಡಗಾಗಲಿ, ಎಲ್ಲಾ ಕಲಾವಿದರೊಂದಿಗೂ ಸೌಹಾರ್ದ ಬಾಂಧವ್ಯ ಇಟ್ಟುಕೊಂಡಿರುವ ಶ್ರೀಯುತ ಕುಡ್ವರವರು ಎಲ್ಲರನ್ನೂ ಸಮಾನರಾಗಿ ಕಾಣುವವರು. ಯಾವುದೇ ನೂತನ ಪೌರಾಣಿಕ ಅಥವಾ ಐತಿಹಾಸಿಕ ಪ್ರಸಂಗಗಳನ್ನು ಈ ಮೇಳಗಳು ಪ್ರದರ್ಶಿಸಿದಾಗ ಕೇವಲ ಪ್ರೇಕ್ಷಕರಾಗಿ ಕುಳಿತು ತಮ್ಮ ನೇರ ನಿಷ್ಠುರ ಮಾತಿನಿಂದ ಪ್ರಬುದ್ಧತೆಯ ವಿಮರ್ಶಾ ಲೇಖನವನ್ನು ಬರೆದು ತಪ್ಪಿದ್ದರೆ ಸರಿಪಡಿಸಲು ಸ್ಫೂರ್ತಿ ನೀಡುವಂತಹ ಅಪ್ರತಿಮ ಕಲಾವಿಮರ್ಶಕರು. ಅಶಕ್ತ, ಅನಾರೋಗ್ಯಕ್ಕೊಳಗಾದ ಕಲಾವಿದರನ್ನು ಯಾವುದೇ ಸದ್ದುಗದ್ದಲವಿಲ್ಲದೆ ಪ್ರಚಾರ ಬಯಸದೆ ಸ್ಪಂದಿಸಿ ತಮ್ಮಿಂದಾದಷ್ಟು ಸಹಾಯ ಮಾಡುತ್ತಿರುವ ಅಪ್ರತಿಮ ವ್ಯಕ್ತಿತ್ವ ಕುಡ್ವರವರದ್ದು.
ಮೂಡಬಿದ್ರಿಯ ಯಕ್ಷಸಂಗಮ , ಯಕ್ಷೋಪಾಸನಂ ಸಂಘಟನೆಯನ್ನು ಕಟ್ಟಿ ಮೂಡಬಿದ್ರಿಯಲ್ಲಿ ಹಾಗೂ ಸುತ್ತ ಮುತ್ತ ಹಲವಾರು ಯಕ್ಷಗಾನ ತಾಳಮದ್ದಳೆ ಗಳನ್ನು ಸಂಘಟಿಸಿ ಸ್ಥಳೀಯ ಉತ್ಸಾಹಿತ ಯಕ್ಷಗಾನ ಅಭಿಮಾನಿಗಳನ್ನು ಯಕ್ಷಗಾನ ಅರ್ಥದಾರಿ ಕಲಾವಿದರನ್ನಾಗಿ ತಯಾರು ಮಾಡಿದ, ತಯಾರು ಮಾಡುತ್ತಿರುವ ಕೀರ್ತಿ ನಿಸ್ವಾರ್ಥಿ ಕಲಾವಿದ ಶ್ರೀ ಕುಡ್ವ ರವರಿಗೆ ಸಲ್ಲುತ್ತದೆ ಎಂದು ಹೇಳಿದರೆ ಅದು ಹೆಮ್ಮೆಯ ಮಾತಾದೀತು. ವಾರದ ಪ್ರತೀ ಮಂಗಳವಾರ ಮೂಡಬಿದ್ರಿಯ ಮಾರಿಗುಡಿಯ ವಠಾರದಲ್ಲಿ ಅವರ ಹಾಗೂ ಅವರ ಇನ್ನಿತರ ಪ್ರಬುದ್ಧ ಕಲಾವಿದರ ಗರಡಿಯಲ್ಲಿ ಅನೇಕ ಮಹಿಳಾ ಮತ್ತು ಪುರುಷ ಅರ್ಥದಾರಿಗಳು ತಯಾರಾಗುತ್ತಿದ್ದು ತಾವು ಸಂಘಟಿಸುವ ಕಾರ್ಯ ಕ್ರಮಗಳಲ್ಲಿ ಅವರುಗಳಿಗೆ ಗರಿಷ್ಠ ಅವಕಾಶ ನೀಡಿ ಪ್ರಬುದ್ಧ ಅರ್ಥದಾರಿ ಕಲಾವಿದರುಗಳನ್ನಾಗಿ ಮಾಡುವ ಅಸಾಧಾರಣ ಕೆಲಸದ ಕೀರ್ತಿ ಶ್ರೀ ಕುಡ್ವಾ ರವರದ್ದು ಮತ್ತು ಅವರ ಬಳಗಕ್ಕೆ ಸೇರುತ್ತದೆ. ಯಾವುದೇ ದೊಡ್ಡ ಕೂಟದಲ್ಲಿ ದೊಡ್ಡ ದೊಡ್ಡ ಕಲಾವಿದರ ಸಮ್ಮುಖದಲ್ಲಿ ಅರ್ಥದಾರಿಗಳಾಗಿ ಮೆರೆಯುತ್ತಿರುವ, ಶ್ರೀ ಶಾಂತಾರಾಮ ಕುಡ್ವ, ಯಾವುದೇ ಪಾತ್ರಕ್ಕೆ ಸೈ ಎನಿಸುವಂತ ಗಟ್ಟಿ ಕಲಾವಿದ, ಸಮರ್ಥ ಕಲಾವಿದ .ಅದು ನಾಯಕನ ಪಾತ್ರವಾಗಲಿ, ಖಳ ನಾಯಕನ ಪಾತ್ರವಾಗಲಿ, ಸ್ತ್ರೀ ಪಾತ್ರವಾಗಲಿ, ಹಾಸ್ಯ ಪಾತ್ರವಾಗಲಿ, ಪ್ರಸಂಗದ ಚೌಕಟ್ಟಿನಲ್ಲಿ ಎದುರಾಳಿ ಪಾತ್ರಧಾರಿ ಕಲಾವಿದನೂ ಕೂಡ ಬೆರಗಾಗುವಂತೆ ಸಮರ್ಥವಾಗಿ ಪ್ರಸಂಗವನ್ನು ನಿರ್ವಹಿಸುತ್ತಿರುವ ಕೀರ್ತಿ ನಮ್ಮ ಕುಡ್ವ ರವರಿಗೆ ಸೇರಿದ್ದು.
ಶ್ರೀ ಕುಡ್ವರವರ ತಮ್ಮ ಮಾತೃ ಭಾಷೆ ಕೊಂಕಣಿ ಭಾಷೆಯ ಅಭಿವೃದ್ಧಿಯಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಕೊಂಕಣಿ ನಾಟಕ ಸಾಹಿತ್ಯ ರಚನೆ,ಸಂಭಾಷಣೆ,ಕೊಂಕಣಿ ಯಕ್ಷಗಾನದಲ್ಲಿ ವೇಷಧಾರಿಯಾಗಿ ಪಾತ್ರ ನಿರ್ವಹಣೆ, ವಿಶ್ವ ಕೊಂಕಣಿ ಕೇಂದ್ರ ಇತ್ತೀಚೆಗೆ ಅವರ ಬಗ್ಗೆ ನಡೆಸಿದ
ವಿಡಿಯೋ ಸಂದರ್ಶನದಲ್ಲಿ ಕೊಂಕಣಿ ಭಾಷಾ ಅಭಿವೃದ್ಧಿಯಲ್ಲಿ ಇವರ ಪಾತ್ರದ ಬಗ್ಗೆ ಸಂಪೂರ್ಣ ಚಿತ್ರಣ ಕೊಂಕಣಿ ಭಾಷೆಯಲ್ಲಿಯೇ ನೀಡಿದೆ. ಮಂಗಳೂರು ಆಕಾಶವಾಣಿಯೂ ಇವರ ಯಕ್ಷಗಾನ ಸಂಘಟನಾ ಚಾತುರ್ಯ ಹಾಗೂ ಇತರ ಚಟುವಟಿಕೆಗಳ ಬಗ್ಗೆ ಇತ್ತೀಚೆಗೆ ಸಂದರ್ಶನ ನಡೆಸಿದೆ.
ಸಂಘಟನೆ, ವಿಮರ್ಶೆ, ಸಾಹಿತ್ಯ ರಚನೆ, ಧಾರ್ಮಿಕ, ಶಿಕ್ಷಣ ಕ್ಷೇತ್ರ, ತುಳು, ಕನ್ನಡ, ಕೊಂಕಣಿ ಭಾಷೆಯ ಯಕ್ಷಗಾನ, ನಾಟಕ ರಂಗ, ದಾನ ಧರ್ಮ, ವ್ಯಾಪಾರ ರಂಗ (ತಮ್ಮ ವೃತ್ತಿಯಲ್ಲಿ) ಬಹುತೇಕವಾಗಿ ಎಲ್ಲಾ ರಂಗಗಳಲ್ಲೂ ಒಂದಲ್ಲವೊಂದು ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಅವಿರತವಾಗಿ ಹೆಚ್ಚಾಗಿ ದಿನ ಪೂರ್ತಿ ತೊಡಗಿಸಿಕೊಂಡಿರುವ ಶ್ರೀಯುತ ಶಾಂತಾರಾಮ ಕುಡ್ವಾ ರವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದು ,
ಅವರು ವ್ಯಕ್ತಿಯಲ್ಲ ಶಕ್ತಿ ಎಂದೇ ಹೇಳಬೇಕಾಗುತ್ತದೆ.
ಆಡು ಮುಟ್ಟದ ಸೊಪ್ಪಿಲ್ಲ, ಶಾಂತಾರಾಮರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬ ನಾಣ್ಣುಡಿ ಖಂಡಿತವಾಗಿಯೂ ಅವರಿಗೆ ಒಪ್ಪುತ್ತದೆ ಮತ್ತು ಅವರಿಗೆ ಸಲ್ಲುತ್ತದೆ. ಈಗಾಗಲೇ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಿತ ನೂರಾರು ಸಂಮಾನ ಪುರಸ್ಕ್ರತರಾದ ಶಾಂತರಾಮ ಕುಡ್ವರಿಗೆ ಈ ಸಂಮಾನ, ಅವರ ಸಾಧನೆಯ ಕಿರೀಟಕ್ಕೊಂದು ಇನ್ನೊಂದು ಗರಿಯಾದೀತು.
ಇಂದು ಮಂಗಳೂರಿನ ರಥಬೀದಿಯ ಶ್ರೀ ಕುಡ್ತೇರಿ ಶ್ರೀ ಮಹಾಮ್ಮಾಯೀ ದೇವಸ್ಥಾನದ ವಠಾರದಲ್ಲಿ ಅವರಿಗೆ ನಡೆಯಲಿರುವ ಸಂಮಾನ ಕಾರ್ಯಕ್ರಮಕ್ಕೆ ನಾವೆಲ್ಲರೂ ಶುಭ ಹಾರೈಸೋಣಾ, ಸಾಧ್ಯವಾದರೆ ನಾವು ಕೂಡ ಭಾಗಿಯಾಗಿ ನಮ್ಮ ಗೌರವವನ್ನು ನಾವು ಹೆಚ್ಚಿಸಿಕೊಂಡು ತನ್ಮೂಲಕ ಶ್ರೀ ಶಾಂತಾರಾಮ ಕುಡ್ವಾ ರವರಿಗೆ ನಮ್ಮ ಗೌರವ ಸಮರ್ಪಿಸೋಣ ಎಂಬುದೇ ಈ ಲೇಖಕನ ಕಳಕಳಿಯ ಮನವಿಯಾಗಿದೆ. ಹಾಗೆಯೇ ನಮ್ಮ ಮೂಡಬಿದ್ರಿಯ ಹೆಮ್ಮೆಯ ಪುತ್ರ ಶ್ರೀ ಶಾಂತಾರಾಮ ಕುಡ್ವ ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಅವರನ್ನು ಅರಸಿ ಬರಲಿ, ಅವರಿಂದ ಇನ್ನೂ ಹೆಚ್ಚಿನ ಸಾಂಸ್ಕ್ರತಿಕ ಚಟುವಟಿಕೆಗಳು ನಡೆಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದರೊಂದಿಗೆ ನಾಳಿನ ಅವರ ಸಂಮಾನ ಕಾಯಕ್ರಮಕ್ಕೆ ಶುಭ ಹಾರೈಸುತ್ತೇನೆ. ಹಾಗೂ ಅವರ ಕಲಾರಂಗಕ್ಕಾಗಿ ಅವರ ಅಸಾಧಾರಣ ಸೇವೆಯನ್ನು ಗುರುತಿಸಿದ, ಕಳೆದ 100 ವರ್ಷಗಳಿಂದ ನಿರಂತರ ವಾರದಕೂಟ ನಡೆಸುತ್ತಿರುವ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ, ಶ್ರೀ ಕುಡ್ತೇರಿ ಮಹಾಮ್ಮಾಯೀ ದೇವಸ್ಥಾನ ಇವರಿಗೂ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತೇನೆ.
ರಾಘವೇಂದ್ರ ಭಂಡಾರ್ಕರ್, ಮೂಡಬಿದ್ರಿ
