ವಾಸುದೇವ ರಂಗಾಭಟ್ಟರಲ್ಲಿ 14 ನೇ ತಾರೀಖಿನಂದು ತಮ್ಮಲ್ಲಿ ಕೊಂಚ ಮಾತನ್ನಾಡುವುದಿದೆ ಎಂದಾಗ ಬಹಳ ಖುಷಿಯಿಂದ 15 ನೇ ತಾರೀಖು 2016 ರಂದು ನನಗೆ ವೇಳೆಯನ್ನು ಕೊಟ್ಟಿದ್ದರು. ಉಡುಪಿಯ ನಮ್ಮ ಮನೆಯಿಂದ ಕೂಗಳತೆ ದೂರದಲ್ಲಿರುವ ವಾಸುದೇವ ರಂಗಾ ಭಟ್ಟರ ಮನೆಗೆ ಹೋಗಿ ಅನೌಪಚಾರಿಕವಾಗಿ ನಡೆಸಿದ ಒಂದು ಘಂಟೆಯ ಸಂದರ್ಶನದ ಪೂರ್ಣ ಪಾಠವಿದು.
ನನ್ನ ಸ್ವ-ಆಸಕ್ತಿಗೆ ಬೇಕಾಗಿ ತಾಳಮದ್ದಳೆ ಕ್ಷೇತ್ರದ ಯುವಪೀಳಿಗೆಯ ಅರ್ಥದಾರಿಗಳಲ್ಲಿ ಮುಂಚೂಣಿಯಲ್ಲಿರುವ ವಾಸುದೇವ ರಂಗಾ ಭಟ್ಟರ ಸಂದರ್ಶನವನ್ನು ಮಾಡಿದ್ದೇನೆ. ಇದರ ಮೂಲ ಉದ್ದೇಶ ವಾಸುದೇವ ರಂಗಾ ಭಟ್ಟರ ಅನಿಸಿಕೆ ಅಭಿಪ್ರಾಯಗಳು ಸಮಸ್ತ ಯಕ್ಷಗಾನ ಕಲಾಸಕ್ತರನ್ನು ತಲುಪಲಿ ಎನ್ನುವುದು.
ವಾಸುದೇವ ರಂಗಾ ಭಟ್ಟರು ನೇರವಾಗಿ, ಬಿಚ್ಚುಮಾತುಗಳಲ್ಲಿ ತಮ್ಮ ಅಭಿಪ್ರಾಯಗಳನ್ನಿಲ್ಲಿ ವ್ಯಕ್ತಪಡಿಸಿದ್ದಾರೆ. ಇವರ ಅಭಿಪ್ರಾಯಗಳು ಅರ್ಥಗರ್ಭಿತವೂ, ಚಿಂತನಶೀಲತೆಯುಳ್ಳದ್ದೂ, ಶೈಕ್ಷಣಿಕ ನೆಲೆಗಟ್ಟಿನಿಂದ ಕೂಡಿದವುಗಳಾಗಿದ್ದು ಬಹಳ ಪ್ರೌಢವೂ ಆಗಿವೆ. ಸಹಜವಾಗಿ, ವಸ್ಥುನಿಷ್ಠವಾಗಿ ತಮ್ಮ ಅನಿಸಿಕೆಗಳನ್ನು ಪೂರಕವಾದ ಐತಿಹಾಸಿಕ ಮತ್ತು ಶೈಕ್ಷಣಿಕ ನೆಲೆಗಟ್ಟಿನ ಉದಾಹರಣೆಗಳಿಂದ ಪುಷ್ಟೀಕರಿಸುತ್ತಾ ಸಾಗುತ್ತಾರೆ.
ಅನೇಕ ಹೊಸ ವಿಚಾರಗಳನ್ನು ಈ ಸಂದರ್ಶನದಲ್ಲಿ ವಾಸುದೇವ ರಂಗಾ ಭಟ್ಟರು ಬಿಚ್ಚಿಟ್ಟಿದ್ದಾರೆ. ಪ್ರತೀ ಪ್ರಶ್ಣೆಯ ಉತ್ತರದಲ್ಲಿಯೂ ಬಹಳ ಅಧಿಕಾರಯುತವಾಗಿ ವಿಶಿಷ್ಟ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. ಇವರ ಈ ಸಂದರ್ಶನವನ್ನು ಮಾಡಿದ ಬಳಿಕ ನಮ್ಮ ಉತ್ತಮ ಕಲೆಯಾದ ಯಕ್ಷಗಾನ ತಾಳಮದ್ದಳೆ is in safe hands ಎಂದೆನ್ನಿಸಿತು. ಈ ಇಡಿಯ ಸಂದರ್ಶನದ ಪೂರ್ಣ ಪಾಠವನ್ನು ಓದಿದರೆ ನಿಮಗೂ ಹಾಗನ್ನಿಸೀತು.
ಕಟೀಲು ಸಿತ್ಲ: ತಾವು ಯಕ್ಷಗಾನ ಕ್ಷೇಟ್ರಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆ
ವಾಸುದೇವ ರಂಗಾ ಭಟ್ಟ: ನಾನು ಮೂಲತಃ ಮಧೂರಿನವನು. ಮಧೂರು ಯಕ್ಷಗಾನದ ಪರಿಸರ. ಆಟ-ಕೂಟಗಳು ನಿರಂತರವಾಗಿ ನಡೆಯುತ್ತಿದ್ದ ಕ್ಷೇತ್ರವದು. ಅದನ್ನು ನೋಡಿ ಯಕ್ಷಗಾನದತ್ತ ಆಕರ್ಷಿತನಾದವನು. ಬಹುಷಃ ನನ್ನ 8-9 ರ ವಯಸ್ಸಿನಲ್ಲಿ ಮಕ್ಕಳ ಬಳಗದ ಮೂಲಕ ಜಾತ್ರಾ ಮಹೋತ್ಸವಗಳಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡಬೇಕು ಎನ್ನುವ ಆಶಯವಿತ್ತು. ಆಗ ತರುಣ ಕಲಾ ವೃಂದ ಎನ್ನುವ ಸಂಸ್ಥೆ ಯಕ್ಷಗಾನ ನಾಟ್ಯ ತರಬೇತಿಯನ್ನು ದಿವಾಣ ಶಿವಶಂಕರ ಭಟ್ಟರ ಮೂಲಕ ಆಯೋಜಿಸಿತು. ಹಾಗೆ ನಾನು ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಲು ಆ ತರಬೇತಿಗೆ ಸೇರಿಕೊಂಡೆ. ಯಕ್ಷಗಾನ ನಾಟ್ಯದ ಹೆಜ್ಜೆಗಾರಿಕೆಯನ್ನು ಅಲ್ಲಿ ಗುರುಗಳಾದ ದಿವಾಣ ಶಿವಶಂಕರ ಭಟ್ಟರಿಂದ ಕಲಿತುಕೊಂಡೆ. ನಾನು 4 ನೇ ತರಗತಿಯಲ್ಲಿದ್ದ ಸಮಯದಲ್ಲಿ ಲವ-ಕುಶ ಕಾಳಗ ಪ್ರಸಂಗದಲ್ಲಿ ಲವನಾಗಿ ನನ್ನ ರಂಗಪ್ರವೇಶ. ಮಧೂರಿನ ಸಮೀಪದ ಪರಕ್ಕಿಲ ಮಹಾದೇವ ದೇವಳದಲ್ಲಿ.  ಆ ನಂತರ ಅನೇಕ ಸಣ್ಣ-ಪುಟ್ಟ ವೇಷಗಳನ್ನು ಮಾಡುತ್ತಲೇ ಇದ್ದೆ.
ಮುಳಿಯ ಧನ್ವಂತರಿ ಯಕ್ಷಗಾನ ಕಲಾ ಸಂಘ ಎನ್ನುವ 50 ವರ್ಷಗಳಿಗೂ ಹಿಂದಿನ ಪ್ರಸಿದ್ಧ ಸಂಘ. ತುಂಬ ಗೌರವಾನ್ವಿತರಾದಂತಹ  ಉಳಿಯತ್ತಾಯರು (ಅಂದರೆ ಯಜಮಾನರು ಎನ್ನುವ ಅರ್ಥ) ಎನ್ನುವವರ ಆಶ್ರಯದಲ್ಲಿ ರೂಪುಗೊಂಡ ಸಂಸ್ಥೆಯಿದು. ಹಲವಾರು ಉದ್ದಾಮ ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಸಂಘವಿದು. ಈಗಲೂ ಸಕ್ರಿಯವಾಗಿದೆ. ಪ್ರತೀ ವಾರವೂ ವಾರದ ಅಭ್ಯಾಸ ಕೂಟಗಳು ನಡೆಯುತ್ತಲೇ ಇರುತ್ತದೆ. ಈ ಸಂಸ್ಥೆಗೆ ತನ್ನದೇ ಆದ ಯಕ್ಷಗಾನದ ವೇಷಭೂಷಣಗಳಿದ್ದುವು. (ಈಗ ಇಲ್ಲ, ನೋಡಿಕೊಳ್ಳುವವರು ಇಲ್ಲವಾಗಿ ಮಾರಾಟ ಮಾಡಿದ್ದಾರೆ) ಈ ಸಂಸ್ಥೆಯ ವತಿಯಿಂದ ಹವ್ಯಾಸಿ ಕಲಾವಿದರುಗಳ ಕೂಡುವಿಕೆಯ ಅನೇಕ ಆಟ-ಕೂಟಗಳು ನಡೆಯುತ್ತಲೇ ಇದ್ದುವು. ನಾನು ಆಗ ನನ್ನ ಶಾಲೆ ಮುಗಿಸಿ ಈ ತಂಡದ ವೇಷಭೂಷಣದೊಂದಿಗೆ ಆಟವಿದ್ದಲ್ಲೆಲ್ಲಾ ಹೋಗಿ ಸಣ್ಣ-ಪುಟ್ಟ ಪಾತ್ರಗಳನ್ನು (ದೇವತೆಗಳ ಬಲ, ರಾಕ್ಷಸ ಬಲ ಇತ್ಯಾದಿ) ನಿರಂತರವಾಗಿ ನನ್ನ 8-9 ನೇ ತರಗತಿಯಲ್ಲಿಯವರೆಗೂ ಮಾಡುತ್ತಾ ಬಂದೆ.
ಮಧೂರು ಕ್ಷೇತ್ರದಲ್ಲಿ ಒಮ್ಮೆ ವೀರಮಣಿ ಕಾಳಗದಲ್ಲಿ ಶುಭಾಂಗನ ಪಾತ್ರ ವಹಿಸಿದ್ದೆ. ತೆಂಕಬೈಲು ತಿರುಮಲೇಶ್ವರ ಭಾಗವತರ ಶಿಷ್ಯರಾದ ಭಾಗವತರಾದ ರವಿಶಂಕರ ಸಿ. ಎಚ್, ಇಳಿ ಶೃತಿಯಲ್ಲಿನ ಹಾಡುಗಾರಿಕೆಯಾದರೂ ಒಳ್ಳೆಯ ಶೃತಿಜ್ಞಾನ, ಸಾಹಿತ್ಯಜ್ಞಾನ, ಪುರಾಣಜ್ಞಾನ, ರಂಗನಡೆಗಳನ್ನು ಬಲ್ಲ ಓರ್ವ ಒಳ್ಳೆಯ ಭಾಗವತರು. ಇವತ್ತಿಗೂ ತುಂಬಾ ಭಾಗವತರ ಪದಗಳನ್ನು ಕೇಳಿದ ಬಳಿಕವೂ ಒಳ್ಳೆಯ ಭಾಗವತರಲ್ಲಿ ನಾನು ಸ್ಥಾನವನ್ನು ಕಲ್ಪಿಸುವ ಭಾಗವತರು ರವಿಶಂಕರ ಸಿ. ಎಚ್. ಇವರು ಅಂದಿನ ನನ್ನ ಶುಭಾಂಗನ ಅರ್ಥವನ್ನು ಕೇಳಿ ನೀನು ತಾಳಮದ್ದಳೆಯಲ್ಲಿ ಅರ್ಥ ಹೇಳಬೇಕು ಎನ್ನುವಂತೆ ಪ್ರೋತ್ಸಾಹಿಸಿ ಆದಿತ್ಯವಾರದ ವಾರದ ಕೂಟಗಳಿಗೆ ಕರೆದುಕೊಂಡು ಹೋದವರು. ತಾಳಮದ್ದಳೆಯಲ್ಲಿ ಸೀತಾಪಹಾರದ ಲಕ್ಶ್ಮಣ ನನ್ನ ಮೊಟ್ಟ ಮೊದಲ ಅರ್ಥ. ಆ ಬಳಿಕ ಅನೇಕ ಅರ್ಥವನ್ನು ವಾರದ ಕೂಟಗಳಲ್ಲಿ ಮತ್ತು ಇನ್ನಿತರ ಪ್ರದರ್ಶನಗಳಲ್ಲಿ ಹವ್ಯಾಸಿ ನೆಲೆಯಲ್ಲಿ ಹೇಳುತ್ತ ಬಂದೆ.
ನನ್ನ ಎಸ್. ಎಸ್. ಎಲ್. ಸಿ ಮುಗಿದ ಬಳಿಕ ಉಡುಪಿಗೆ ನನ್ನ ಅಣ್ಣನ ಕಾಲೇಜಿನ ಪ್ರವೇಶಕ್ಕೆಂದು ಬಂದವನು ನಾನು. ಇಲ್ಲಿನ ಪ್ರಾಂಶುಪಾಲರ ಪ್ರೇರಣೆಯಿಂದ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಕಾವ್ಯದ ಅಭ್ಯಾಸಕ್ಕೆ ಸೇರಿಕೊಂಡೆ. ವಾಸ್ತವ್ಯಕ್ಕೆ ಅದಮಾರು ಮಠದಲ್ಲಿ ಇದ್ದೆ. ಈ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟವರು ಶ್ರೀಹರಿನಾರಾಯಣ ದಾಸ ಆಸ್ರಣ್ಣರು. ಇಲ್ಲಿ ಬಹು ದೊಡ್ಡ ತಿರುವು ನನಗೆ ಲಭಿಸಿದ್ದು ಈಂದುಗುಳಿ ಗೋಪಾಲಕೃಷ್ಣ ಭಟ್ಟರ ಮೂಲಕ. ಇವರು ಹುಟ್ಟುಕುರುಡರಾಗಿದ್ದಾಗ್ಯೂ ಸಂಸ್ಕೃತ ಎಂ. ಎ ಪರೀಕ್ಷೆಗೆ ಕಟ್ಟಿದ್ದರು. ಇವರು ನನಗೆ ರೂಂ ಮೇಟ್ ಆಗಿ ದೊರಕಿದರು. ಬಹಳ ಪ್ರಖರವಾದ ವೈಚಾರಿಕತೆಯಿದ್ದ ಸಹೃದಯೀ ಇವರು. ನನಗೆ ಇವರ ಜತೆ ನಿರಂತರ ಸಂವಾದಗಳು, ವಾಗ್ವಾದಗಳು ನಡೆಯುತ್ತಲಿತ್ತು. ಇವರ ಆಸಕ್ತಿಯ ಕ್ಷೇತ್ರವೂ ವಿಸ್ತಾರವಾಗಿತ್ತು. ಕಲೆ, ಸಾಹಿತ್ಯ, ವಿಮರ್ಶೆ, ದರ್ಶನ ಶಾಸ್ತ್ರ ಹೀಗೆ. ಇವರಿಗೆ ಗ್ರಂಥಗಳನ್ನು ಓದಿ ಹೇಳುತ್ತಾ ಹೇಳುತ್ತಾ ನನ್ನಲ್ಲಿ ಓದುವ ಹವ್ಯಾಸವೂ ಬೆಳೆಯಿತು. ಜತೆಯಲ್ಲಿ ಆ ಕ್ಷೇತ್ರಗಳ ಬಗ್ಗೆ ಜ್ಞಾನವೂ ನನ್ನಲ್ಲಿ ವೃದ್ಧಿಸಿತು. ಯಕ್ಷಗಾನ ನನ್ನಿಂದ ಬಿಟ್ಟು ಹೋಗುತ್ತದೆಯೇನೋ ಎನ್ನುವ ಹಂತದಲ್ಲಿರುವಾಗಲೇ ಇಲ್ಲಿನ ವಿದ್ಯಾದಾಯಿನಿ ಯಕ್ಷಗಾನ ಕಲಾ ಸಂಘ ಎನ್ನುವ ಸಂಸ್ಥೆಗೆ ಹೋಗುತ್ತಿದ್ದ ಈಂದುಗುಳಿ ಗೋಪಾಲಕೃಷ್ಣ ಭಟ್ಟರು ನನ್ನನ್ನು ಈ ಸಂಘದಲ್ಲಿ ಅರ್ಥ ಹೇಳುವುದಕ್ಕೆ ಕರೆದೊಯ್ದರು. ಹಾಗೆ ಮತ್ತೆ ಯಕ್ಷಗಾನದ ಅರ್ಥಗಾರಿಕೆ ಮುಂದುವರಿಯಿತು. ನಾನು ಬೆಳೆಯುತ್ತಿದ್ದ ಸಮಯದಲ್ಲಿ ನಮ್ಮ ಮಧೂರು ಆಸುಪಾಸು ಇಡೀ ರಾತ್ತ್ರಿಯ ಕೂಟಗಳು ಬಹಳ ಕಡಿಮೆ ಇತ್ತು. ದೊಡ್ಡ ಕೂಟಗಳು ಅಂತ ನಾವು ಹೇಳುವ ಅಂದರೆ ಶೇಣಿ-ಸಾಮಗರು ಮುಂತಾದವರಿರುವ ಕೂಟದ ಇಡೀ ರಾತ್ರಿಯ ತಾಳಮದ್ದಳೆಯನ್ನು ಮೊಟ್ಟಮೊದಲಿಗೆ ನೇರವಾಗಿ ನೋಡಿದ್ದೇ ನಾನು ಉಡುಪಿಗೆ ಬಂದ ಮೇಲೆ. ಬ್ರಹ್ಮಾವರದಲ್ಲಿ ನಡೆದ ತಾಳಮದ್ದಳೆಯದು. ಶೇಣಿಯವರ ಅರ್ಥಗಾರಿಕೆ ನನ್ನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿತು ಮಾತ್ರವಲ್ಲದೇ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ವಿಶೇಷ ಆಸಕ್ತಿ ಮೂಡಲು ಇದೂ ಕೂಡ ಒಂದು ಕಾರಣವಾಯಿತು. ಉಡುಪಿಯಲ್ಲಿರುವಾಗಲೂ ಊರಿಗೆ ಹೋಗಿ ಅಲ್ಲಿನ ಸಂಘ-ಸಂಸ್ಥೆಗಳಲ್ಲಿ ವೇಷಗಳನ್ನು ಮಾಡುತ್ತಿದ್ದೆ. ಆದರೆ ಹೆಚ್ಚಾಗಿ ತಾಳಮದ್ದಳೆಗಳಲ್ಲಿಯೇ ಭಾಗವಹಿಸತೊಡಗಿದೆ. ಇದಕ್ಕೆ ಕಾರಣ ಉಡುಪಿಯ ಪರಿಸರ.
ಕಟೀಲು ಸಿತ್ಲ: ತಾವು ಎಲ್. ಎಲ್. ಬಿ ಯನ್ನು ಮಾಡಿದ್ದೀರಿ. ವಕೀಲಿ ವೃತ್ತಿಯಲ್ಲಿ ತೊಡಗುವುದರ ಹೊರತಾಗಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರವನ್ನೇ ವೃತ್ತಿಯಾಗಿ ಆರಿಸಿಕೊಂಡಿದ್ದರ ಕಾರಣವೇನು?
ವಾಸುದೇವ ರಂಗಾ ಭಟ್ಟ: ಯೋಜನಾಬದ್ಧವಾದ ನಡೆಯಿಂದ ಕೈಗೊಂಡ ತೀರ್ಮಾನವಲ್ಲವದು. ನನ್ನ ವಿದ್ಯಾಭ್ಯಾಸವೂ ಕೂಡ ಅನಿಶ್ಚಿತತೆಯಿಂದಲೇ ಕೂಡಿದ್ದಾಗಿತ್ತು. ನನ್ನ ಎಸ್. ಎಸ್. ಎಲ್. ಸಿ ಮುಗಿದ ನಂತರ ಮುಂದೇನು ಎನ್ನುವ ಯೋಚನೆಯಲ್ಲಿದ್ದ ಕಾಲದಲ್ಲಿ ನನ್ನ ಅಣ್ಣನ ಉಡುಪಿಯಲ್ಲಿನ ಕಾಲೇಜಿನ ಪ್ರವೇಶಕ್ಕಾಗಿ ಬಂದವನನ್ನು ಅಲ್ಲಿನ ಪ್ರಾಂಶುಪಾಲರಾದ ಪಡುಬಿದ್ರೆಯ ಲಕ್ಷ್ಮೀನಾರಾಯಣ ಶರ್ಮರು ಉಡುಪಿ ಒಳ್ಳೆಯ ಬೆಳವಣಿಗೆಯಾಗುವವನಿಗೆ ಎಷ್ಟು ಬೆಳವಣಿಗೆಗೂ ಅವಕಾಶವಿರುವ ಅದೇ ರೀತಿ ಕೆಟ್ಟದಾಗುವುದಿದ್ದರೆ ಅಷ್ಟೇ ಕೆಟ್ಟದಾರಿಗಳೂ ಇರುವ ಸ್ಥಳ. ನಿಮ್ಮ ಮಗ ಹೇಗೆ ಬೆಳವಣಿಗೆಯಾಗುತ್ತಾನೆನ್ನುವುದು ನೀವು ಕೊಟ್ಟ ಸಂಸ್ಕಾರದಿಂದ ಉತ್ತರ ಸಿಕ್ಕುತ್ತದೆ. ಯೋಗ ಇದ್ದದ್ದೇ ಆದಲ್ಲಿ ಒಳ್ಳೆಯ ಬೆಳವಣಿಗೆಯನ್ನು ಕಂಡಾನು ಎಂಬುದಾಗಿ ನನ್ನ ತಂದೆಯವರಲ್ಲಿ ಹೇಳಿದ ಅವರ ಪ್ರೋತ್ಸಾಹದಿಂದಲೇ ಸಂಸ್ಕೃತ ಕಾಲೇಜಿಗೆ ಸೇರಿದವನು. ಸಂಜೆ ಕಾಲೇಜಿನಲ್ಲಿ ಓದುವುದರ ಮೂಲಕ ಪಿ. ಯು.ಸಿ ಯಲ್ಲಿ ಉತ್ತಮ ದರ್ಜೆಯನ್ನು ಪಡೆದು ಉತ್ತೀರ್ಣನಾದೆ. ಒಳ್ಳೆಯ ಅಂಕಗಳು ಬಂದ ಕಾರಣ, ನನಗೆ ಆಗಿನಿಂದಲೂ ತರ್ಕ, ವಾದಗಳ ಮೇಲಿನ ಆಸಕ್ತಿಯೂ ಕಾರಣವಾಗಿ ಎಲ್. ಎಲ್. ಬಿ ಯನ್ನು ಸೇರಿಕೊಂಡೆ. ಆಗ ನಾನು ನಾನು ಸಂಸ್ಕೃತದ ಮೂರನೇ ವರ್ಷದಲ್ಲಿದ್ದೆ. ಪ್ರಾಥಮಿಕ ಹಂತದ ಸಂಸ್ಕೃತ ಪಾಠಗಳು ಆಗಿತ್ತು. ಸಾಹಿತ್ಯದ ಎರಡನೆಯ ವರ್ಷದಲ್ಲಿದ್ದ ನಾನು ಅದನ್ನು ಬಿಟ್ಟು ಎಲ್. ಎಲ್. ಬಿಯನ್ನು ಸೇರಿಕೊಂಡೆ.
ಎಲ್. ಎಲ್. ಬಿ ಮಾಡುತ್ತಿದ್ದಾಗಲೂ ನಿರಂತರ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದೆ. ತಾಳಮದ್ದಳೆ ಕೂಟಗಳಲ್ಲಿನ ಹೆಚ್ಚಾದ ಭಾಗವಹಿಸುವಿಕೆಯಿಂದ ನನ್ನ ಎಲ್. ಎಲ್. ಬಿಗೆ ಕೊಂಚ ತೊಡಕಾಯಿತು. ಒಂದೆರಡು ಪರೀಕ್ಷೆಗಳನ್ನು ತಾಳಮದ್ದಳೆಯಲ್ಲಿನ ಭಾಗವಹಿಸುವಿಕೆಯಿಂದಾಗಿ ಬಿಡಬೇಕಾಯಿತು. ನನ್ನ ಎಲ್. ಎಲ್. ಬಿ ಪದವಿಯನ್ನು ಸಂಪೂರ್ಣಗೊಳಿಸಿದ ಮೇಲೆ, ತಾಳಮದ್ದಳೆ ಕ್ಷೇತ್ರದಲ್ಲಿನ ಅಪಾರವಾದ ಆಸಕ್ತಿ ಮತ್ತು ಅವಕಾಶಗಳನ್ನು ಗಮನಿಸಿ ಇಷ್ಟದ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಳ್ಳೋಣ ಎನ್ನುವ ಭಾವನೆಯಿಂದ ಈ ಕ್ಷೇತ್ರವನ್ನೇ ಜೀವನದ ದಾರಿಯನ್ನಾಗಿ ಆಯ್ದುಕೊಂಡೆ.
ಈ ತಾಳಮದ್ದಳೆ ಕ್ಷೇತ್ರ ನನಗೆ ಅಯಾಚಿತವಾಗಿ ವೃತ್ತಿಯಾದದ್ದು ಹೊರತು ಯೋಜನಾಬದ್ಧವಾಗಿ ಇದನ್ನು ವೃತ್ತಿಯನ್ನಾಗಿ ಮಾಡಿಕೊಂಡದ್ದಲ್ಲ.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯ ಉದ್ದೇಶ ಏನಿರಬೇಕು?
ವಾಸುದೇವ ರಂಗಾ ಭಟ್ಟ: ಯಾವುದೇ ಕಲೆ ರಸಾತ್ಮಕವಾಗಿ ಪ್ರಸ್ತುತಗೊಂಡಾಗ ಅದು ಸಾರ್ಥಕವಾಗುವುದು. ದಿ| ಹರಿದಾಸ ಮಲ್ಪೆ ಶಂಕರನಾರಾಯಣ ಸಾಮಗರು ಹೇಳಿದ ಮಾತುಗಳು ಅಂಗೀಕೃತ. ತಾಳಮದ್ದಳೆ ಮನೋರಂಜನಾತ್ಮಕವಾಗಿ ಪ್ರಬೋಧನಾತ್ಮಕವಾಗಿ ಇರಬೇಕು. ಯಾವುದೋ ಒಂದು ಬೋಧನೆ, ಒಂದು ವಿವೇಚನೆ ಬಹಳ ಮುಖ್ಯವಾಗಿ ಇರಲೇಬೇಕು ಅದರ ಜತೆಯಲ್ಲಿ ರಂಜನೆಯೂ ಬೇಕು. ಯಾಕೆಂದರೆ ರಸಾತ್ಮಕವಾಗಿರುವುದರಿಂದಲೇ ರಂಜನೆ ಸಿಗುವುದು. ಆದುದರಿಂದ ಈ ಎರಡನ್ನೂ ಇಟ್ಟುಕೊಂಡು ಬೆಳೆಯಬೇಕಾದ ಕಲೆ ತಾಳಮದ್ದಳೆ.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯ ಅರ್ಥದಾರಿಗೆ ಇರಬೇಕಾದ ಮುಖ್ಯ ಗುಣಲಕ್ಷಣಗಳೇನು?
ವಾಸುದೇವ ರಂಗಾ ಭಟ್ಟ: ಇಂಥದ್ದೇ ಅರ್ಹತೆಗಳು ಎನ್ನುವ ಹಾಗೆ ಮಾನದಂಡವಿಲ್ಲ. ಯಾಕೆಂದರೆ ವಿಶಿಷ್ಟರಾದ ಅನೇಕ ಕಲಾವಿದರನ್ನು ನಾವು ಗಮನಿಸಿದಾಗ ಒಂದೊಂದು ವೈಶಿಷ್ಟ್ಯ ಅವರಲ್ಲಿರುವುದು ನಮಗೆ ತಿಳಿಯುತ್ತದೆ. ಹಾಗೆಂದು ನಾವು ಫಕ್ಕನೇ ಗ್ರಹಿಸಬಹುದಾದಷ್ಟು ಅಪರಿಪೂರ್ಣತೆ ಕೆಲವು ವಿಷಯಗಳಲ್ಲಿ ಅವರಲ್ಲಿ ಇರುತ್ತದೆ. ವೈಶಿಷ್ಟ್ಯಪೂರ್ಣವಾದ ಅರ್ಥಗಾರಿಕೆಯುಳ್ಳವರಿಗೆ ಅವರವರ ಆ ವೈಶಿಷ್ಟ್ಯವೇ ಅರ್ಹತೆ. ಇನ್ನು ಸಾಮಾನ್ಯವಾಗಿ ಹೇಳುವುದಿದ್ದರೆ, ಉಚ್ಛಾರ ಶುದ್ಧಿ, ಭಾಷಾ ಶುದ್ಧಿ, ಸಾಹಿತ್ಯ ಜ್ಞಾನ, ಪ್ರಸಂಗ ಜ್ಞಾನ, ಒಳ್ಳೆಯ ಓದು, ವಿವೇಚನಾ ಸಾಮರ್ಥ್ಯ, ಶೃತಿಬದ್ಧತೆ ಇವಿಷ್ಟು ಯಕ್ಷಗಾನೀಯ ಶೈಲಿಯಲ್ಲಿ ಪಾಕಗೊಂಡು ಬರಬಹುದಾಗುತ್ತದೆಯಾದರೆ ತಾಳಮದ್ದಳೆಯ ಅರ್ಥದಾರಿ ಆಗಬಹುದು.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಕುಳಿತುಕೊಳ್ಳುವ ಭಂಗಿ, ಹಾವ-ಭಾವ, ಉಡುಗೆ-ತೊಡುಗೆ ಇವುಗಳ ಬಗ್ಗೆ
ವಾಸುದೇವ ರಂಗಾ ಭಟ್ಟ: ಪರಿಣಾಮದ ದೃಷ್ಟಿಯಿಂದ ಅವೆಲ್ಲವೂ ಬೇಕು. ಸಾಮಾನ್ಯವಾಗಿ ಸಭಿಕರು ಯಾವ ಉಡುಗೆಯಲ್ಲಿ ಇರುತ್ತಾರೋ ಅದೇ ರೀತಿಯ ಉಡುಗೆಯಲ್ಲಿ ನಾವಿರುವುದಾದರೂ ಆ ತಾಳಮದ್ದಳೆಯ ಸಂದರ್ಭದಲ್ಲಿ ಅದಕ್ಕಿಂತ ಬೇರೆಯಾಗಿ ಕಾಣಬೇಕು. Art is making you belief. ಅಂದರೆ ಅವರು ನಂಬುವ ಹಾಗೆ ಮಾಡುವುದು. ಉದಾಹರಣೆಗೆ ನಾವು ಅರ್ಜುನನಾಗಿ, ಕೌರವನಾಗಿ ಪಾತ್ರ ನಿರ್ವಹಿಸುತ್ತಿರುವಷ್ಟು ಹೊತ್ತೂ ಕೂಡ ಇದು ಅರ್ಜುನ ಅಥವಾ ಕೌರವ ಮಾತಾಡುತ್ತಿರುವುದು ಎನ್ನುವ ಹಾಗೆ ಕಾಣಿಸಿಕೊಳ್ಳುವುದಕ್ಕೆ ಮತ್ತು ನೋಡುಗನನ್ನು ನಂಬಿಸುವುದಕ್ಕೆ ಎಷ್ಟು ವ್ಯತ್ಯಾಸ ಬೇಕೋ ಅಷ್ಟು ವ್ಯತ್ಯಾಸವನ್ನು ಉಡುಗೆ-ತೊಡುಗೆಗಳಲ್ಲಿ ಕಾಣಿಸಬೇಕು. ಈ ವ್ಯತ್ಯಾಸವನ್ನು ಕಾಣಿಸಬೇಕೆನ್ನುವಾಗ ಉಡುಗೆ-ತೊಡುಗೆ, ಹಾವ-ಭಾವ, ಮಾತಿನ ಶೈಲಿ, ಓಘ ಎಲ್ಲವೂ ಮುಖ್ಯವಾಗುತ್ತದೆ. ತಾಳಮದ್ದಳೆಯ ವಾತಾವರಣ ಅಂತ ನಾವೇನು ಹೇಳುತ್ತೇವೆಯೋ ಅದರ ನಿರ್ಮಾಣವಾಗಬೇಕಿದ್ದರೆ ಅದರ ಎಲ್ಲಾ ಘಟಕಗಳೂ ಕೂಡ ಬಹಳ ಮುಖ್ಯವಾಗುತ್ತದೆ.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯಲ್ಲಿ ಹಿಮ್ಮೇಳದವರು ಬಯಲಾಟದಲ್ಲಿದ್ದಂತೆ ಪೇಟವನ್ನು ಕಟ್ಟಿಕೊಂಡು ಕುಳಿತುಕೊಳ್ಳಬೇಕು ಎನ್ನಿಸದೇ?
ವಾಸುದೇವ ರಂಗಾ ಭಟ್ಟ: ವರ್ತಮಾನ ಕಾಲದಲ್ಲಿ ಎರಡೂ ಬಗೆ ಇವೆ. ತೆಂಕು-ಬಡಗು ಎನ್ನುವ ತಿಟ್ಟುಗಳ ಬೇಧವಿಲ್ಲದೇ ಕೆಲವರು ಮುಂಡಾಸು ಕಟ್ಟಿ ಕುಳಿತುಕೊಳ್ಳುತ್ತಾರೆ, ಇನ್ನು ಕೆಲವರು ಮುಂಡಾಸು ಇಲ್ಲದೇ ಭಾಗವಹಿಸುತ್ತಾರೆ.  ಅರ್ಥದಾರಿಗಳು ಬಣ್ಣ ಬಣ್ಣದ, ಗಾಢವಾಗಿ ಕಣ್ಣೀಗೆ ರಾಚುವ ಉಡುಗೆ-ತೊಡುಗೆಗಳನ್ನು ತೊಟ್ಟುಕೊಳ್ಳಬಹುದು. ಆದರೆ ತೊಟ್ಟುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಕೂಡ ಕಣ್ಣಿಗೆ ರಾಚದಿರುವ ಬಣ್ಣದ, ಸರಳವಾದ ತೊಡುಗೆಗಳನ್ನೇ ತೊಟ್ಟುಕೊಳ್ಳುತ್ತಾರೆ. ಆ ವೇದಿಕೆಯಲ್ಲಿನ ಸಭ್ಯತೆಗೆ, ಶಿಸ್ತಿಗೆ ಯಾವುದು ಸಮ್ಮತವೆನ್ನಿಸುತ್ತದೆಯೋ ಮತ್ತು ತಾಳಮದ್ದಳೆಯ ವಾತಾವರಣವನ್ನು ನಿರ್ಮಿಸುವಲ್ಲಿ ಪರಿಣಾಮಕಾರಿಯೋ ಅಂತಹ ಉಡುಗೆ-ತೊಡುಗೆಗಳನ್ನು ತೊಟ್ಟುಕೊಳ್ಳಬೇಕು. ಈ ದೃಷ್ಟಿಯಿಂದ ನೋಡಿದರೆ ಹಿಮ್ಮೇಳದವರು ಮುಂಡಾಸು ಧರಿಸುವುದು ಸೂಕ್ತವೇ ಆಗಿದೆ.
ಪ್ರಾಯೋಗಿಕವಾಗಿ ಇದಕ್ಕೆ ತೊಡಕುಗಳನ್ನು, ಆಕ್ಷೇಪಗಳನ್ನು ಹಿಮ್ಮೇಳದವರು ಹೇಳಿಯಾರು. ನಾನು ಹೇಳುತ್ತಿರುವುದು ಆದರ್ಶದ ದೃಷ್ಟಿಯಿಂದ ಮಾತ್ರ. ಹೀಗೆಯೇ ಆಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಹಿಮ್ಮೇಳದ ಸ್ವರೂಪದಲ್ಲಿ ಈ ಮುಂಡಾಸಿನ ವೈಶಿಷ್ಟ್ಯತೆ ಇದರೆ ತಾಳಮದ್ದಳೆಯ ವಾತಾವರಣಕ್ಕೆ ಪೂರಕ.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯಲ್ಲಿ ಪಾತ್ರಧಾರಿಗಳು ಪ್ರಸಂಗಕ್ಕೆ ನಿಷ್ಠತೆಯನ್ನು ತೋರಿಸಬೇಕೋ? ಅಥವಾ ಮೂಲ ಕಾವ್ಯಕ್ಕೋ?
ವಾಸುದೇವ ರಂಗಾ ಭಟ್ಟ: ಪ್ರಸಂಗ ಮತ್ತು ಮೂಲ ಇವೆರಡನ್ನೂ ಎರಡಾಗಿ ವಿಭಾಗಿಸಿ ನೋಡಬೇಕು. ಒಂದು ಪ್ರಸಂಗಕ್ಕೆ ಯಾವುದು ಮೂಲ ಎನ್ನುವುದು. ಇನ್ನೊಂದು ಆ ಪ್ರಸಂಗದ ಕಥೆಗೆ ಯಾವುದು ಮೂಲ ಎನ್ನುವುದು. ಯಕ್ಷಗಾನ ಬಯಲಾಟವಾಗಲೀ, ತಾಳಮದ್ದಳೆಯಾಗಲೀ ನಮ್ಮ ನಿಷ್ಠೆ ಇರಬೇಕಾದ್ದು ಪ್ರಸಂಗಕ್ಕೆ ಮಾತ್ರ ಎನ್ನುವುದು ನಿರ್ವಿವಾದ. ಯಾಕೆಂದರೆ ಆ ಪ್ರಸಂಗವೆನ್ನುವ ಪಠ್ಯವನ್ನು ಆಧರಿಸಿ ನಾವು ಪ್ರದರ್ಶನವನ್ನು ನೀಡುತ್ತಿದ್ದೇವೆ ಮತ್ತು ಆ ಪಠ್ಯವನ್ನು ಅತಿಕ್ರಮಿಸುವಂತಿಲ್ಲ. ಆದರೆ ಆ ಪಠ್ಯವನ್ನು ನಾವು ವಿಸ್ತರಿಸಬೇಕು, ಪುಷ್ಟವಾಗಿಸಬೇಕು. ಮೂಲವನ್ನು ಪ್ರಸಂಗಕ್ಕೆ ಸಮನ್ವಯ ಮಾಡಿಕೊಳ್ಳುವ ಚಾಕಚಕ್ಯತೆ ಪಾತ್ರಧಾರಿಯಲ್ಲಿರಬೇಕು. ಹೀಗೆ ಮಾಡುವಲ್ಲಿಯೂ ಒಂದು ತೊಡಕಿದೆ. ನಮ್ಮ ಪ್ರಸಂಗಗಳಲ್ಲಿ ಹೆಚ್ಚಿನವು ಕುಮಾರವ್ಯಾಸನ, ಲಕ್ಷ್ಮೀಶನ ಕಾವ್ಯಗಳನ್ನಾಧರಿಸಿ ಇರುವಂಥದ್ದು. ವ್ಯಾಸರ ಕಾವ್ಯವನ್ನಾಧರಿಸಿ ಅಲ್ಲ. ಈಗ ಮೂಲ ಯಾವುದು? ಈ ಪರಿಸ್ಥಿತಿಯಲ್ಲಿ ಮೂಲ ವ್ಯಾಸಭಾರತವಲ್ಲ, ಕುಮಾರವ್ಯಾಸಭಾರತ. ಆಗ ಕುಮಾರವ್ಯಾಸಭಾರತವನ್ನು ಸಮಂಜಸವಾಗಿ ಅಭ್ಯಸಿಸಿ ಅದರಲ್ಲಿ ಅಡಕವಾಗಿರಬಹುದಾದ ಅಂಶಗಳನ್ನು ಪ್ರಸಂಗಕ್ಕೆ ತೊಡಕಾಗದ ಹಾಗೆ ಅಳವಡಿಸಿಕೊಳ್ಳಬಹುದು. ಕುಮಾರವ್ಯಾಸನಲ್ಲಿ ದೈವಿಕತೆಯನ್ನು ಆರೋಪಿಸದೇ ಇದನ್ನೇ ಇನ್ನಷ್ಟು ವಿಸ್ತರಿಸಿದರೆ ವ್ಯಾಸರು ಭಾರತವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ, ಚಿತ್ರಿಸುತ್ತಾ ಹೋದರು. ಅವರನ್ನು ಆಧರಿಸಿ ಕುಮಾರವ್ಯಾಸ ಮತ್ತೆ ಪುನಃ ತನ್ನದೇ ಆದ ಸ್ವಂತ ವ್ಯಾಖ್ಯಾನಗಳನ್ನು, ಪಾತ್ರಚಿತ್ರಣಗಳನ್ನು ಕೊಟ್ಟಿದ್ದಾನೆ. ಇದನ್ನು ಒಪ್ಪಿ ಪ್ರಸಂಗಗಳು ಬೆಳೆದು ಬಂದಿದೆ. ಅಂದರೆ ವೈಯಕ್ತಿಕವಾದ ಕುಮಾರವ್ಯಾಸನ ಪಾತ್ರಚಿತ್ರಣವನ್ನು ಅವಲಂಬಿಸಿ ಯಕ್ಷಗಾನ ಪ್ರಸಂಗಗಳ ಪರಂಪರೆ ರಚಿಸಲ್ಪಟ್ಟಿವೆ. ಅದನ್ನು ಒಪ್ಪಿ ಪ್ರದರ್ಶನ ನೀಡುವಾಗ ಒಬ್ಬೊಬ್ಬರದು ಒಂದೊಂದು ವಿಚಾರಗಳು ಎಂಬುದಾಗಿ ವಿಚಾರಗಳನ್ನು ದೂರವಿಡುವುದಲ್ಲ. ಈ ಚಿತ್ರಣಗಳನ್ನು ಉಪಯೋಗಿಸಿಕೊಂಡು ಪ್ರಸಂಗದ ಚೌಕಟ್ಟಿನೊಳಗಡೆ ಯಕ್ಷಗಾನದಲ್ಲಿ ನಾವು ಕೊಡುವ ಒಂದು ಪಾತ್ರದ ವ್ಯಾಖ್ಯಾನ ಹಾಗೂ ಚಿತ್ರಣ ಏನು? ಇದು ಮುಖ್ಯವಾಗಬೇಕು. ಈ ಸೃಜನಶೀಲತೆ ಎನ್ನುವುದು ಬಹಳ Flexible ಪದ. ಇದರ ವಿಸ್ತಾರ, ಅರ್ಥವ್ಯಾಪ್ತಿ, ಮಿತಿಯನ್ನು ಅರ್ಥದಾರಿಯಾದವನು ತನ್ನ ವಿವೇಚನೆಯಿಂದ ನಿರ್ಣಯಿಸಬೇಕು. ಇದ್ದದ್ದನ್ನು ಇದ್ದ ಹಾಗೆ ಹೇಳುವುದಲ್ಲ. ಅಥವಾ ಸರಳಾನುವಾದ ಮಾಡುವುದಲ್ಲ. ತಾಳಮದ್ದಳೆಗಳಲ್ಲಿ ವೈಶಿಷ್ಟ್ಯಪೂರ್ಣವಾದ ವ್ಯಾಖ್ಯಾನಗಳು ಬಹಳ ಪ್ರಾಮುಖ್ಯ. ಹೀಗೆ ವ್ಯಾಖ್ಯಾನಿಸುವ ಸಂದರ್ಭದಲ್ಲಿ ನಾವು ಓದಿದ ಓದು, ಅರಿತುಕೊಂಡ ವಿಷಯಗಳು, ನಮ್ಮ ಅನುಭವಗಳು ಇವುಗಳೆಲ್ಲದರ ನೆಲೆಗಟ್ಟಿನಲ್ಲಿಯೇ ನಾವೆಲ್ಲರೂ ಕೂಡ ಯಾವುದೇ ಪಾತ್ರವನ್ನು ನಿರ್ವಹಿಸುವುದು. ಈಗ ಉದಾಹರಣೆಗೆ ಒಬ್ಬ ಕಥೆಗಾರ ಕರ್ಣನ ಪಾತ್ರದ ಚಿತ್ರಣವನ್ನು ನೀಡುತ್ತಾ ಕೆಲ ವಿಚಾರಗಳನ್ನು ವ್ಯಕ್ತಪಡಿಸಿರಬಹುದು. ಆ ವಿಚಾರ ವೈಯಕ್ತಿಕವಾಗಿ ನಮಗೆ ಹೌದೆಂದು ಅನ್ನಿಸಿರಲೂ ಬಹುದು. ಹಾಗೆಂದು ಅದು ನಮಗೆ ಯಾಕೆ ಹೌದೆನ್ನಿಸಿತು ಎನ್ನುವ ಧೋರಣೆಯನ್ನಿರಿಸಿಕೊಂಡು ಆ ಕಥೆಗಾರನ ಚಿತ್ರಣವನ್ನು ಬಳಸಿದಲ್ಲಿ ಅದು ಆ ಕಥೆಗಾರನ ವಿಚಾರವಾಗಿ ಹೊರಹೊಮ್ಮದೇ ನಮ್ಮ ಸೃಜನಶೀಲತೆ ಎನ್ನಿಸಲ್ಪಡುತ್ತದೆ.
ಎಷ್ಟೋಸಲ ಹೀಗಾಗುವುದುಂಟು. ನಿರಂತರವಾಗಿ ಅರ್ಥ ಹೇಳುವ ಹೆಚ್ಚಿನವರಿಗೆ ಈ ಅನುಭವ ಆಗಿರಲಿಕ್ಕೂ ಸಾಕು. ಒಂದು ಪದಕ್ಕೆ ವ್ಯಾಖ್ಯಾನಿಸುವ ಸಮಯದಲ್ಲಿ ಏನೋ ಒಂದು ಹೊಳಹು ಸಿಗುತ್ತದೆ. ಅದನ್ನು ಹೇಳಿ ಎಷ್ಟೋ ಸಮಯದ ಬಳಿಕ ಆ ಅರ್ಥವನ್ನು ಶೇಣಿಯವರೋ, ಸಾಮಗರೋ ಅಥವಾ ಹಿಂದಿನ ಕೆಲ ಹಿರಿಯ ಅರ್ಥದಾರಿಗಳು ಹೇಳಿದ್ದಾರೆ ಎನ್ನುವುದು ತಿಳಿಯುತ್ತದೆ. ಆದರೆ ಆ ವಿಷಯವನ್ನು ನಾವು ಕೇಳಿರುವುದಿಲ್ಲ. ಆದರೆ ಅದೇ ಹೊಳಹು ನಮಗೂ ಆಗಿದ್ದು ಸತ್ಯವೇ. ಹಾಗಿದ್ದಾಗ ಅದು ಅವರದ್ದು ಎಂದೆನ್ನಿಸಬೇಕಾಗಿಲ್ಲ. ಯಾಕೆಂದರೆ ಒಂದೇ ರೀತಿಯ ಯೋಚನೆ ಅಥವಾ ಚಿಂತನೆಗಳು ಒಂದೇ ಕಾಲದಲ್ಲಿಯಾಗಲೀ ಅಥವಾ ಕಾಲಾಂತರದಲ್ಲಿಯಾಗಲೀ ಹಲವು ಜನರಿಗೆ ಬರುತ್ತದೆ. ಇದಕ್ಕೆ ಕಾರಣವೆಂದರೆ ಮೂಲಭೂತವಾಗಿ ಪಾತ್ರಗಳು ಅದೇ, ಸನ್ನಿವೇಶಗಳು ಅದೇ, ವಿವರಗಳು ಅದೇ, ಪದಗಳೂ ಕೂಡ ಅದೇ. ಬದಲಾಗದ ಇವಿಷ್ಟನ್ನು ಇಟ್ಟುಕೊಂಡು ಯೋಚಿಸುವಾಗ ಒಂದೇ ಮಾದರಿಯ ಚಿಂತನೆಗಳು, ಹೊಳಹುಗಳು, ಆಲೋಚನೆಗಳು ಖಂಡಿತ ಬಂದೇ ಬರುತ್ತದೆ. ಇದು ವೈಜ್ಞಾನಿಕ ಸತ್ಯ. ಈ ಪಾತ್ರಗಳನ್ನು ಒಂದೊಂದು ಕಾಲದಲ್ಲಿ ಒಬ್ಬೊಬ್ಬರು ಅನುಭವಿಸುತ್ತಾ ಇರುತ್ತಾರೆ. ಹಾಗಿರುವಾಗ ನಿಜವಾಗಿ ಪರಿಣಾಮ ಮಾಡುವುದು ಆ ಒಂದು ಕಾಲಘಟ್ಟ. ಒಂದಿಪ್ಪತ್ತು ವರ್ಷದ ಹಿಂದಿನ ಆಲೋಚನೆಗಳು ಈ ಕಾಲದ ಆಲೋಚನೆಗಳ ಹಾಗಿಲ್ಲ. ಆ ವ್ಯತ್ಯಾಸಗಳು ಪಾತ್ರದ ಪ್ರಸ್ತುತಿಯಲ್ಲಿ ಕಂಡು ಬಂದರೂ ಕೂಡ ಮೂಲಭೂತವಾದ ಪಾತ್ರದ ವಸ್ಥುವಿಚಾರಗಳು ಒಂದೇ ಆಗಿರುವುದರಿಂದ ಒಂದೇ ರೀತಿಯ ಹೊಳಹುಗಳು, ಚಿಂತನೆಗಳು ಅಥವಾ ಆಲೋಚನೆಗಳು ಖಂಡಿತ ಬರುತ್ತವೆ. ಆದರೆ ಆಲೋಚನೆಗಳು ನಮ್ಮವೇ ಆಗಿದ್ದಷ್ಟು ಅಂದರೆ ನಮಗೇ ಹೊಳೆದ ಚಿಂತನೆಗಳಾಗಿದ್ದಷ್ಟು ಅದು ಚಂದ.
ಆದುದರಿಂದ ಮೂಲವನ್ನು ಮತ್ತು ಪ್ರಸಂಗವನ್ನು ಸಾಧ್ಯವಾದಷ್ಟು ಸಮನ್ವಯ ಮಾಡಿದರೆ ಒಳ್ಳೆಯದು. ಪ್ರಸಂಗ ಮತ್ತು ಮೂಲ ಒಂದಕ್ಕಿಂತ ಒಂದು ತೀರ ಭಿನ್ನವಾಗಿ ಉಭಯ ಧ್ರುವಗಳಲ್ಲಿ ಇದೆಯೆಂದಾದರೆ ಪ್ರಸಂಗವನ್ನೇ ಆಧರಿಸಿ ಮುನ್ನಡೆಯಬೇಕು.
ನಮ್ಮ ಹಿರಿಯ ಅರ್ಥದಾರಿಗಳಲ್ಲಿ ಅನೇಕರು ಇದನ್ನು ಮಾಡುತ್ತಿದ್ದರು. ಸಾಧ್ಯವಾದಷ್ಟು ವ್ಯಾಸರನ್ನು ಒಳಗೊಂಡು, ಕುಮಾರವ್ಯಾಸನನ್ನೂ ಒಪ್ಪಿ, ಪ್ರಸಂಗಕ್ಕೂ ನಿಷ್ಠರಾಗಿ ಈ ಮೂರನ್ನೂ ಸಮನ್ವಯ ಮಾಡಿಕೊಂಡು ಪಾತ್ರ ಚಿತ್ರಣವನ್ನು ಮಾಡುತ್ತಿದ್ದರು. ಅನೇಕ ಕಡೆ ವಿದ್ವಾಂಸರು ಹೇಳಿದ ವಿಚಾರವನ್ನೇ ಉದಾಹರಣೆಯಾಗಿ ಕೊಡುವುದಿದ್ದರೆ ಮಾರೀಚನಲ್ಲಿ ರಾವಣ ಹಲವು ಬಾರಿ ಹೋಗಿದ್ದಾನೆ ಎಂಬುದಾಗಿ ಮೂಲದಲ್ಲಿದೆ. ಆದರೆ ಪ್ರಸಂಗದಲ್ಲಿ ಒಮ್ಮೆ ಮಾತ್ರ ಹೋಗುವುದು ಎನ್ನುವುದಾಗಿ ಇರುವುದು. ಶೇಣಿಯವರು ರಾವಣ ಮಾಡಿದ್ದ ಸಮಯದಲ್ಲಿ ಎರಡೆರಡು ಬಾರಿ ಮಾವ ಮಾರೀಚನಲ್ಲಿ ಹೋಗುವುದೆಂದು ಯೋಚಿಸಿದೆ, ಇವತ್ತು ಈಗ ಹೊರಡುವುದೇ ಎನ್ನುವ ಅರ್ಥದ ಮೂಲಕ ಮೂಲದಲ್ಲಿ ಎರಡೆರಡು ಸಲ ಹೋಗುವ ವಿಚಾರವನ್ನೂ ಪ್ರಸ್ತಾಪಿಸುತ್ತಾ ಪ್ರಸಂಗದಲ್ಲಿ ಒಂದೇ ಸಲ ಹೋಗುವುದು ಎನ್ನುವುದನ್ನೂ ಕೂಡ ಪರಿಣಾಮಕಾರಿಯಾಗಿ ಸಮನ್ವಯಗೊಳಿಸುತ್ತಾರೆ.
ಅರ್ಥದಾರಿಯಾದವನು ಮಾಡಬೇಕಾದುದು ಇದನ್ನೇ ಪ್ರಸಂಗದಲ್ಲಿರುವ ಮೌನವನ್ನು ವಿಶೇಷ ಸಾಧ್ಯತೆಗಳಿಂದ, ವಿಶಿಷ್ಟ ಆಲೋಚನೆಗಳಿಂದ, ಸೃಜನಶೀಲತೆಯಿಂದ ತುಂಬಿಸುವ ಪ್ರಯತ್ನವನ್ನು ವ್ಯಾಖ್ಯಾನಗಳ ಮೂಲಕ ಮಾಡಬೇಕು. ಹೀಗೆ ಮಾಡುವಾಗ ಸಮನ್ವಯ ಮಾಡುವುದು ತುಂಬಾ ಕಷ್ಟದ ಕೆಲಸವೇನಲ್ಲ.
ಕೆಲವು ಕಡೆ ಇತ್ತ ವಾಸುಕಿಶಯನ ಅಂತ ಇದೆ. ಆಗ ಶೇಷಶಾಯಿ ಅಂತ ಹೇಳುವುದಕ್ಕೆ ಬರುವುದಿಲ್ಲ. ಆಗ ಭುಜಗಶಯನ ಅಂತ ಹೇಳಿಕೊಂಡು ಹೋಗಬಹುದು.ಎಷ್ಟೋ ಜನ ಹಿರಿಯ ಕಲಾವಿದರೇ ವಾಸುಕಿಶಯನ ಅಂತ ಹೇಳುತ್ತಾರೆ ಆದರೆ ನಾನು ಶೇಷಶಯನ ಎಂದಿದ್ದನ್ನು ಕೇಳಿದ್ದೇನೆ. ಇದು ಸರಿಯಲ್ಲ. ಹಾಗಾದರೆ ಭಾಗವತ ಹಾಡಿದ ಪದಕ್ಕೆ ಏನರ್ಥ? ಇಂತಹ ಕಡೆಗಳಲ್ಲಿ ಪ್ರಸಂಗಕ್ಕೇ ನಿಷ್ಟತೆಯನ್ನು ತೋರಿಸಬೇಕು.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯಲ್ಲಿ ವೈಚಾರಿಕತೆಯ ಮಹತ್ವವೆಷ್ಟು? ವೈಚಾರಿಕತೆ ಇದರ ವ್ಯಾಖ್ಯಾನ ಏನು?
ವಾಸುದೇವ ರಂಗಾ ಭಟ್ಟ: ಈ ವೈಚಾರಿಕತೆ ಎನ್ನುವುದು ಬಹಳ ಚರ್ಚಾಸ್ಪದ ವಿಚಾರ. ಈಗ ವೈಚಾರಿಕತೆ  ಮರುವ್ಯಾಖ್ಯಾನಗೊಂಡಿದೆ. ಸ್ಥಾಪಿತವಾದ ಮೌಲ್ಯಗಳನ್ನು ಪ್ರಶ್ಣಿಸುವಂತಹ ನಮ್ಮ ವಿಚಾರಪರತೆ ಎನ್ನುವಂತಾಗಿದೆ. ವೈಚಾರಿಕತೆ ಎಂದರೆ ಹಾಗಾಗಬೇಕಿಲ್ಲ. ವಿಚಾರಶೀಲನಾಗಿರುವುದು ಸಹಜವಾಗಿ ಮನುಷ್ಯನಲ್ಲಿ ಇರಬಹುದಾದ ಒಂದು ಗುಣ. ಅಂದರೆ ಜಿಜ್ಞಾಸುವಾಗಿರುವುದೇ ವೈಚಾರಿಕತೆ. ಉದಾಹರಣೆಗೆ ವೈದಿಕ ಎಂದು ಹೇಳಿದ ಕೂಡಲೇ ಅದನ್ನು ಪ್ರಶ್ಣಿಸುವುದೇ ವೈಚಾರಿಕತೆ ಆಗಬೇಕಾಗಿಲ್ಲ. ವೈದಿಕತೆಯ ಒಳಗಡೆ ಅನೇಕ ವೈಚಾರಿಕತೆಯಿದೆ. ನೀವು ಶಾಸ್ತ್ರ, ಉಪನಿಷತ್ತುಗಳನ್ನು ಓದಿದ್ದೀರಾದರೆ ನಿಮಗೆ ತಿಳಿಯುತ್ತದೆ ಅಲ್ಲಿ ಎಲ್ಲವೂ ಕೂಡ ಪ್ರಶ್ಣೋತ್ತರ ರೂಪದಲ್ಲಿಯೇ ಇರುವುದು. ಆದರೆ ಆಧುನಿಕ ವೈಚಾರಿಕತೆಯ ದೃಷ್ಟಿಕೋನದಲ್ಲಿ ಅದು ಸಮ್ಮತವಾಗದೇ ಅದು ವೈದಿಕ ವೈಚಾರಿಕತೆ ಎಂದು ತಿರಸ್ಕರಿಸಬಹುದು. ಆದರೆ ಯಕ್ಷಗಾನ ತಾಳಮದ್ದಳೆಗೆ ಬೇಕಾಗಿರುವುದು ಈ ವೈಚಾರಿಕತೆ. ಅಂದರೆ ಎಲ್ಲವನ್ನೂ ಪ್ರಸಂಗದಲ್ಲಿನ ವ್ಯಾಪ್ತಿಗನುಗುಣವಾಗಿ,  ಭಾವಪೂರ್ಣವಾಗಿ, ಹೊಸ ನೋಟಗಳಿಂದ, ಹೊಳಹುಗಳಿಂದ, ಆಲೋಚನೆಗಳಿಂದ ವಿಶ್ಲ್ಲೇಶಿಸುತ್ತಾ ಹೊಸ ವ್ಯಾಖ್ಯಾನಗಳನ್ನು ಸೃಜನಶೀಲತೆಯಿಂದ ಮಾಡುತ್ತಾ ಹೋಗುವ ವೈಚಾರಿಕತೆ ತಾಳಮದ್ದಳೆಗೆ ಬೇಕು.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಯಲ್ಲಿ  ಈ ಆಧುನಿಕ ವೈಚಾರಿಕತೆಯ ಬಳಸಿಕೊಳ್ಳುವಿಕೆಯನ್ನು ನಾವು ಕಾಣುತ್ತೇವೆ. ಓರ್ವ ಆಧುನಿಕ ಕಥೆಗಾರ ಬರೆದ ಕಥೆಯನ್ನಾಧರಿಸಿದ ಪಾತ್ರಚಿತ್ರಣಗಳು ಉದಾಹರಣೆಗೆ ಅಂಬೆ, ಕರ್ಣ, ದುರ್ಯೋಧನ, ಅಹಲ್ಯೆ, ಭೀಷ್ಮ ಮುಂತಾದವುಗಳು ಆಧಿನಿಕ ವೈಚಾರಿಕತೆಯನ್ನು ಒಳಗೊಂಡಂತವುಗಳು. ಇಲ್ಲಿ ಧರ್ಮವನ್ನು, ಸತ್ಯವನ್ನು ಎಲ್ಲವನ್ನೂ ಆ ಪಾತ್ರಗಳು ಪ್ರಶ್ಣಿಸುತ್ತವೆ ತನ್ಮೂಲಕ ಸಾಮಾಜಿಕ ಕ್ರಾಂತಿಯ ಆಶಯವನ್ನು ಬಿಂಬಿಸುತ್ತವೆ. ದೇವರು, ಧರ್ಮ ಎನ್ನುವುದನ್ನು ಬದಿಗಿಟ್ಟು ಮನುಷ್ಯ ಮನುಷ್ಯನ ಸಂಬಂಧಗಳ ಬಗ್ಗೆ ಮಾತ್ರವೇ ಯೋಚಿಸಿ ಆ ಕಥೆಗಳನ್ನು ಅವಲೋಕಿಸಿದರೆ ಆ ಕಥೆಗಳಲ್ಲಿ ಸತ್ವವಿದೆ. ಆದರೆ ಅದರಲ್ಲಿ ಸತ್ವವಿದೆ ಎನ್ನುವ ಕಾರಣಕ್ಕೆ ಈ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವುದು ಎಷ್ಟು ಸಮಂಜಸ?
ವಾಸುದೇವ ರಂಗಾ ಭಟ್ಟ: ಇವುಗಳನ್ನು ಹಾಗೆಯೇ ತಂದು ತುರುಕುವುದಲ್ಲ. ನಮ್ಮ ಓದು, ಅನುಭವ ಎಲ್ಲವೂ ಕೂಡ ಆ ಪ್ತ್ರದ ಮಾತಾಗಿ ಮೂಡಿಬರಬೇಕು. ನಮ್ಮ ಕಲೆಗಾರಿಕೆ ಇರುವುದೇ ಅಲ್ಲಿ. ನಾವು ಗ್ರಹಿಸಿದ ವಿಚಾರಗಳನ್ನು ಪಾತ್ರ ಗ್ರಹಿಸಿದ ವಿಚಾರಗಳಾಗಿ ಪರಿವರ್ತಿಸಿ, ಅದನ್ನು ಪಾತ್ರದ ಮಾತಾಗಿ ಮಾರ್ಪಡಿಸಬೇಕು. ಆಗ ಅದು ತುಂಬ ಸಹಜವಾಗಿ ಮೂಡಿ ಬರುತ್ತದೆ. ಮತ್ತು ಎಲ್ಲಿಂದಲೋ ತಂದು ತುರುಕಿದ್ದು ಎಂದೆನಿಸುವುದಿಲ್ಲ. ಉದಾಹರಣೆಗೆ ಕೃಷ್ಣ, ರಾಮ ಪಾತ್ರ ಮಾಡುತ್ತಿರುವಾಗ ಆ ಪಾತ್ರಕ್ಕೆ ಒಗ್ಗದ ಮಾತುಗಳನ್ನು ಆಡಿದರೆ ಅದು ಎಲ್ಲಿಂದಲೋ ತಂದು ತುರುಕಿದ್ದು ಎಂದು ಗೊತ್ತಾಗುತ್ತದೆ. ಪಾತ್ರದ ಮರ್ಯಾದೆಗೆ ಒಗ್ಗಿಸಿಕೊಡುವುದರಲ್ಲಿಯೇ ಸೃಜನಶೀಲತೆ ಕೆಲಸ ಮಾಡುವುದು. ಆಧುನಿಕ ಚಿಂತನೆಗಳನ್ನು ಬಳಸುವಾಗಲೂ ಕೂಡ ನಾವು ಅಂದರೆ ಪಾತ್ರ ಪೌರಾಣಿಕ ವಲಯದಲ್ಲಿ ವ್ಯವಹರಿಸುತ್ತಿದ್ದೇವೆ ಎನ್ನುವ ಎಚ್ಚರ ಇದ್ದುಕೊಂಡು ಪಾತ್ರದ ಮರ್ಯಾದೆಗೆ, ಕಥಾಲೋಪವಾಗದಂತೆ, ಪ್ರಸಂಗದ ಔಚಿತ್ಯವನ್ನು ಮೀರದಂತೆ ಒಗ್ಗಿಸಿಕೊಂಡು ತರಬಹುದು.
ಉದಾಹರಣೆಗೆ ಈಗಿನ ವೈಚಾರಿಕತೆಯ ಹಿನ್ನೆಲೆಯಲ್ಲಿ ಭೀಷ್ಮನದ್ದು ಸ್ತ್ರೀ ವಿರೋಧಿಯಾದ ನಿಲುವು ಎನ್ನುವುದಾಗಿ ವಿರೋಧಿಸಿ ಒಂದು ಚಿತ್ರಣವನ್ನು ನೀಡಿದ್ದಾರೆಂದರೆ, ಅಂಬೆಯಾಗಿ ಭೀಷ್ಮನನ್ನು ವಿರೋಧಿಸಬಹುದು. ಆದರೆ ಈಗಿನ ಸ್ತ್ರೀವಾದದ ಮತ್ತು ಪುರುಷಪ್ರಧಾನ ಸಮಾಜದ ನಿಲುವನ್ನು ವಿರೋಧಿಸುವ ನಿಲುವಿನೊಂದಿಗೆ ಅಂಬೆ ಪಾತ್ರಧಾರಿ ತನ್ನ ಪಾತ್ರವನ್ನು ನಿರ್ವಹಿಸುವಾಗ ಈ ಆಧುನಿಕ ನಿಲುವು ಆಗಿನ ಅಂಬೆಯ ಕಾಲಕ್ಕೆ ಸಮ್ಮತವಾಗಿರುವಂತೆ ಇರಬೇಕು. ಚಿಂತನೆಗಳು, ಧೋರಣೆಗಳು ಏನೇ ಇರಲಿ. ಆಗಿನ ಕಾಲಘಟ್ಟಕ್ಕೆ ಸಮ್ಮತವಾಗದ ವಿಚಾರಗಳನ್ನು ಈಗಿನ ಆಧುನಿಕ ವೈಚಾರಿಕತೆಯ ಮೂಲಕ ವಿರೋಧಿಸಹೊರಟರೆ ಆಗ ಪಾತ್ರಧಾರಿ ಅಂಬೆಯಾಗುವುದಿಲ್ಲ. ಆ ಪಾತ್ರದಿಂದ ಹೊರಗೆ ನಿಂತ ಹಾಗೆ ಆಗುತ್ತದೆ.
ಈಗಿನ ವೈಚಾರಿಕ ಧೋರಣೆಗಳನ್ನು, ಚಿಂತನೆಗಳನ್ನು ಅಂಬೆಯ ಕಾಲಘಟ್ಟಕ್ಕೆ,  ಅಂಬೆ ಮಾಡಿರಬಹುದಾದ ಆಲೋಚನೆಗಳಾಗಿ ಒಗ್ಗಿಸಿಕೊಂಡು ಪಾತ್ರ ಪ್ರಸ್ತುತಪಡಿಸುವುದರಲ್ಲಿ ಕಲಾವಿದನ ವಿವೇಚನೆ ಮತ್ತು ನೈಪುಣ್ಯತೆ ಇರಬೇಕಾದದ್ದು.
ಕಟೀಲು ಸಿತ್ಲ: ಅರ್ಥಗಾರಿಕೆಯಲ್ಲಿ ಸಂದೇಶ ಮುಖ್ಯವೋ? ಪದದ ಭಾವ ಮುಖ್ಯವೋ
ವಾಸುದೇವ ರಂಗಾ ಭಟ್ಟ: ಸಂದೇಶಗಳು ಸಹಜವಾಗಿ ಹುಟ್ಟುವಂತೆ ಪ್ರದರ್ಶನವಿರಬೇಕು. ಸಂದೇಶ ಕೊಡುವುದಕ್ಕೆ ಬೇಕಾಗಿ ಅರ್ಥ ಹೇಳುವುದಲ್ಲ. ಸನ್ನಿವೇಶಕ್ಕೆ ಅನುಗುಣವಾಗಿ ಭಾವ ಪ್ರಧಾನವಾದ ಪಾತ್ರ ಪ್ರಸ್ತುತಿಯನ್ನು ಮಾಡಿದಾಗ ಪ್ರಸಂಗದ ಸಂದೇಶ ಮತ್ತು ಪ್ರಸಂಗದ ಆಶಯ ಸಹಜವಾಗಿ ಹುಟ್ಟುತ್ತದೆ.
ಪ್ರಸಂಗದಲ್ಲಿ ಪ್ರತಿಪಾದಿತವಾಗಿರುವ ಸಂದೇಶಗಳಿಗಿಂತಲೂ ಒಳ್ಳೆಯ ಸಂದೇಶ ಕೊಡಲು ಸಾಧ್ಯವಿದ್ದಲ್ಲಿ ಕೊಡಬಹುದು. ಆದರೆ ಪ್ರತಿಗಾಮಿ ಧೋರಣೆಯಿಂದ ಇಂತಹ ಸಂದೇಶಗಳು ಬೇಡ ಎನ್ನುವ ಹಾಗೆ ತೀರ್ಮಾನಿಸಿ ಕೆಲ ಸನ್ನಿವೇಶಗಳನ್ನು ಬಿಡುವುದು ಅಥವಾ ನಾವು ಬಯಸಿದ ಸಂದೇಶವೇ ಹುಟ್ಟಬೇಕು ಎನ್ನುವ ಕಾರಣಕ್ಕೆ ಪ್ರಸಂಗದ ನಡೆಯನ್ನು ತಿರುಚಿ ಕೆಲ ಸನ್ನಿವೇಶಗಳನ್ನು ವಿಜೃಂಭಿಸುವುದು ಮಾಡಬಾರದು. ಉದಾಹರಣೆಗೆ ಸ್ತ್ರೀಪರ ಚಿಂತನೆಗಳಿಗಾಗಿ, ಪುರುಷ ಪ್ರಧಾನ ಸಮಾಜದ ಧೋರಣೆಯನ್ನು ಪ್ರಶ್ನಿಸುವ ಸಲುವಾಗಿ, ಆಧುನಿಕ ವೈಚಾರಿಕತೆಯನ್ನು ಅವಲಂಬಿಸಿಕೊಂಡು ಭೀಷ್ಮ ವಿಜಯವನ್ನು ಅಂಬಾ ವಿಜಯವನ್ನಾಗಿಸುವುದು ಸರಿಯಲ್ಲ. ಭೀಷ್ಮ ವಿಜಯವಾಗಿಯೇ ಪ್ರಸಂಗ ಇರುವಾಗ ಹೊರಹೊಮ್ಮುವ ಸಂದೇಶ ಎಷ್ಟು, ಅಷ್ಟನ್ನು ಪಾತ್ರೋಚಿತವಾಗಿ ಕೊಡಬಹುದು. ಭೀಷ್ಮ ವಿಜಯವನ್ನು ಮಾಡದೇ ಅದರಿಂದ ಬೇರೆ ಸಂದೇಶವನ್ನು ಹೊರಡಿಸುವುದು ಎಂದಾದರೆ ಅದು ಪ್ರಸಂಗದ ಆಶಯಕ್ಕೆ ವಿರೋಧ ಮತ್ತು ಪ್ರಸಂಗಕ್ಕೆ ಪ್ರತಿಕೂಲವಾದ ಸಂದೇಶ ಎನ್ನಿಸಲ್ಪಡುತ್ತದೆ. ಹಾಗೆ ಆಗಬಾರದು.
ಇದಕ್ಕೆ ಪೂರಕವಾಗಿ ಇನ್ನೊಂದು ಉದಾಹರಣೆಯನ್ನು ಕೊಡುತ್ತೇನೆ. 15 ವರ್ಷಗಳ ಹಿಂದೆ ಪೇಜಾವರ ಶ್ರೀಗಳು ಚೆನ್ನೈಯಲ್ಲಿ ಚಾತುರ್ಮಾಸ್ಯದಲ್ಲಿದ್ದ ಸಮಯ. ಅಭ್ಯಾಸಕೂಟಕ್ಕೆ ಪೇಜಾವರ ಶ್ರೀಗಳು ನಮ್ಮನ್ನು ಚೆನ್ನೈಗೆ ಬರಮಾಡಿಕೊಂಡರು. ನಮ್ಮ ಒಂದು ತಂಡ ಅಲ್ಲಿಗೆ ಹೋಗಿ ಸೀತಾಪಹಾರ ಪ್ರಸಂಗ ತಾಳಮದ್ದಳೆಯನ್ನು ಪ್ರದರ್ಶಿಸಿತು. ಪ್ರಸಂಗ ಮುಗಿದ ಬಳಿಕ ಓರ್ವರು ಬಂದು ನೀವು ಈ ಪ್ರಸಂಗದಿಂದ ಏನು ಕೊಟ್ಟಿರಿ? ಎಂದು ಪ್ರಶ್ಣಿಸಿದರು. ನಾವು ಕೊಟ್ಟಾಯಿತಲ್ಲ ಸರ್ ಎಂದೆ. ಹಾಗಲ್ಲ, ನೀವು ಸೀತಾಪಹಾರ ಮಾಡಿದ ಮೇಲೆ ರಾವಣನನ್ನು ಕೊಲ್ಲುವ ಕಥೆಯನ್ನೂ ತೋರಿಸಬೇಕಲ್ಲ. ಕೇವಲ ಸೀತಾಪಹಾರವಾದಲ್ಲಿಗೇ ನಿಲ್ಲಿಸಿದರೆ ಏನು ಸಂದೇಶ ಕೊಟ್ಟ ಹಾಗೆ ಆಯಿತು? ಇದು ನಿಜವಾಗಿಯೂ ಯೋಚಿಸಬೇಕಾದ ವಿಚಾರ. ಕೇವಲ ಸೀತಾಪಹಾರ ಪ್ರಸಂಗವನ್ನು ಮಾತ್ರ ಮಾಡಿದರೆ ತಪ್ಪಲ್ಲ. ಇದರಿಂದ ಮುಂದೆ ಕೆಡುಕಾಗುತ್ತದೆ ಎಂದು ಅನ್ನಿಸುವಂತೆ ಪ್ರದರ್ಶನ ನೀಡಬೇಕು.
ಇನ್ನೊಂದು ಉದಾಹರಣೆಯೆಂದರೆ ಕೃಷ್ಣ ಸಂಧಾನ ಪ್ರಸಂಗ ಕುಮಾರವ್ಯಾಸ ಭಾರತವನ್ನಾಧರಿಸಿದ ದೇವೀದಾಸ ಕವಿಯ ರಚನೆ. ಎಲೆ ಮುರಾಂತಕ ಲಾಲಿಸೈ ಬೆಂಬಲಕೆ ….. ಕಲಹದಲಿ ನಿನ್ನಡಿಯೊಳೆನ್ನಯ ತಲೆಯನೈದೆ ಸಮರ್ಪಿಸುವೆ ಎನ್ನುವ ಪದದಲ್ಲಿಗೆ ಕೃಷ್ಣ ಸಂಧಾನ ಮುಕ್ತಾಯವಾದರೆ ಹೋಗುವ ಸಂದೇಶಕ್ಕೂ ಅದರ ನಂತರದ ಪದ ನಗುತಲಾ ಮಾಧವನು… ಮರಣವಂ ಬಯಸೀರ್ಪನೀ ಖಳನು ಎನ್ನುವ ಪದದಲ್ಲಿಗೆ ಮುಕ್ತಾಯವಾದಾಗ ಹೋಗುವ ಸಂದೇಶಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ದುರ್ಯೋಧನ ವೇದಾಂತ ಮಾತಾಡುವುದುದು ಮಾತ್ರ, ಈತ ಖಳ ದುರ್ಯೋಧನ. ಇವನ ಮಾತನ್ನು ಕೇಳಿದರೆ ಸರ್ವನಾಶ ಕಂಡಿತ ಎನ್ನುವ ಶ್ರೀಕೃಷ್ಣ ಮಾತಿಗೂ, ದುರ್ಯೋಧನನ ವಿರೋಧ ಭಕ್ತಿಯ ವೇದಾಂತವೆಂದು ಭ್ರಮೆಯನ್ನು ಹುಟ್ಟಿಸುವ ಮಾತಿಗೂ ಬಹಳ ವ್ಯತ್ಯಾಸವಿದೆ. ಹೆಚ್ಚಾಗಿ ಕೌರವನ ಮಾತೇ ಕೊನೆಯ ಮಾತನ್ನಾಗಿಸುತ್ತಿದ್ದಾರೆ ಇತ್ತೇಚೆಗೆ. ಅವನನ್ನು ಉದಾತ್ತೀಕರಿಸಿ ಚಿತ್ರಿಸಿ ತಾಳಮದ್ದಳೆಯನ್ನು ಮುಗಿಸುತ್ತಾರೆ. ಇದರ ಬದಲಿಗೆ ನಿಜವಾದ ಸಂದೇಶವನ್ನು ಕೊಡುವ ಕಾಳಜಿಯುಳ್ಳವರು ಶ್ರೀಕೃಷ್ಣನ ಮಾತನ್ನು ಕೊನೆಯ ಮಾತನ್ನಾಗಿಸಿದರೆ ಬಹಳ ಒಳ್ಳೆಯದು.
ಸಂದೇಶಗಳನ್ನು ಹೇರುವುದಲ್ಲ. ಸಂದೇಶಗಳು ಇಂಥದ್ದು ಎನ್ನುವುದನ್ನು ತೋರಿಸಿಕೊಡುಬೇಕು ಅಷ್ಟೆ. ಯಾವ ಸಂದೇಶವನ್ನು ಯಾರು ಹೇಗೆ ತೆಗೆದುಕೊಳ್ಳುತ್ತಾರೆನ್ನುವುದು ಅವರವರ ವಿವೇಚನೆಗೆ, ಸಂಸ್ಕಾರಕ್ಕೆ ಬಿಟ್ಟದ್ದು. ಆದರೆ ನಾವು ಎಲ್ಲಾ ಕೋನಗಳನ್ನು ತೋರಿಸುವ ಪ್ರಯತ್ನವನ್ನು ಮಾಡಬೇಕು.
ಕಟೀಲು ಸಿತ್ಲ: ಅರ್ಥಗಾರಿಕೆಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಅತೀ ಹೆಚ್ಚಾಗಿ ಬಳಸಿಕೊಳ್ಳುವುದು ಎಷ್ಟು ಸರಿ? ಅದರಿಂದ ಪ್ರಯೋಜನವೇನು?
ವಾಸುದೇವ ರಂಗಾ ಭಟ್ಟ: ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಕೆಲವೊಮ್ಮೆ ಉಲ್ಲೇಖಕ್ಕಾಗಿ ಮತ್ತು ಪುರಾವೆಯ ರೂಪದಲ್ಲಿ ಕೆಲವೊಂದು ಮಾತುಗಳನ್ನು ಆಡುವುದು ಸಹಜವೇ. ಅದರಲ್ಲಿ ಸಂಸ್ಕೃತ ಶ್ಲೋಕಗಳೂ ಒಂದು. ಅಗತ್ಯವೇ ಇಲ್ಲದ ಕಡೆಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಹೇಳುವವರು ಬಹಳಷ್ಟು ಮಂದಿಗಳಿದ್ದಾರೆ. ಇದು ಆರೋಪವಲ್ಲ, ನನ್ನ ಅನಿಸಿಕೆ. ಉದಾಹರಣೆಗೆ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ನಾವು ವಾದ ಮಾಡುತ್ತಿರುವಾಗ ಇಂತಹ ಸೆಕ್ಷನ್ ನಲ್ಲಿ ಇಂತಹ ಕಾನೂನು ಹೀಗಿದೆ ಎನ್ನುವುದನ್ನು ಉಲ್ಲೇಖಿಸಲಾಗುತ್ತದೆ. ಮತ್ತೆ ಪುನಃ ಅದರ ವಿವರಣೆಯನ್ನೂ ಕೊಡುತ್ತೇವೆ. ಆ ಸೆಕ್ಷನ್ ನಲ್ಲಿ ಎಲ್ಲವೂ ಉಂಟು. ಆದರೆ ಅದರ ವ್ಯಾಖ್ಯಾನವನ್ನು ನಾವು ಈ ಒಂದು ಪ್ರಕರಣಕ್ಕೆ ಅನ್ವಯಿಸಿ ಕೊಡುವ ಪ್ರಯತ್ನವನ್ನು ಮಾಡುತ್ತೇವೆ. ಇದೇ ರೀತಿಯಲ್ಲಿ ಶ್ಲೋಕಗಳನ್ನು ಉದ್ಧರಿಸುವಾಗ ಅರ್ಥದಾರಿಯಾದವನ ವಿವೇಚನೆ ಹಾಗಿರಬೇಕು. ಶ್ಲೋಕದ ಅರ್ಥಏನು ಎನ್ನುವುದನ್ನು ವಿವರಿಸುವುದಕ್ಕಷ್ಟೇ ಅದು ಸೀಮಿತವಾಗದೇ ಈ ಸನ್ನಿವೇಶಕ್ಕೆ ಅದನ್ನು ಒಗ್ಗಿಸಿ ಮರು ವ್ಯಾಖ್ಯಾನಗಳ ಮೂಲಕ ಅದನ್ನು ಪ್ರಸ್ತುತಪಡಿಸಬೇಕು. ಶ್ಲೋಕದ ವ್ಯಾಖ್ಯಾನವಾಗಿ ಅರ್ಥ ಇರಬೇಕೆ ಹೊರತು ಶ್ಲೋಕದ ಅನುವಾದವಾಗಿ ಅಲ್ಲ.
ಇಂತಹ ವ್ಯಾಖ್ಯಾನಗಳೂ ಕೂಡ ಎಲ್ಲಾ ಸಂದರ್ಭಗಳಲ್ಲಿ ಬೇಕಾಗಿಲ್ಲ. ಕೆಲ ಸನ್ನಿವೇಶಗಳಲ್ಲಿ ಮಾತ್ರ ಬೇಕಾಗಿರುವುದು. ಉದಾಹರಣೆಗೆ ಶ್ರೀಕೃಷ್ಣ ಸಂಧಾನದಲ್ಲಿ ಶ್ರೀಕೃಷ್ಣ ದ್ಯೂತದ ಪಣವನ್ನು ಹೇಳುವ ಸಮಯದಲ್ಲಿ ಕುಮಾರವ್ಯಾಸ ಭಾರತದ ಪದವನ್ನು ಹೇಳುವವರೂ ಇದ್ದಾರೆ. ಸಂಸ್ಕೃತ ಶ್ಲೋಕದಂತೆ ಇಲ್ಲಿ ಉಲ್ಲೇಖದ ರೀತಿಯಲ್ಲಿ ಅದನ್ನು ಮಂಡಿಸುತ್ತಾರೆ. ಆದರೆ ಅದು ಶ್ರೀಕೃಷ್ಣನೇ ಹೇಳಿದ್ದು ಎಂದು ಪ್ರೇಕ್ಷಕರು ನಂಬುವ ರೀತಿಯಲ್ಲಿ ಮೂಡಿ ಬರಬೇಕು. ಈ ಕುಮಾರವ್ಯಾಸನ ಪದಗಳು, ಪ್ರಸಂಗದ ಪದಗಳು ಸಹಜವಾಗಿ ಒಗ್ಗಿಕೊಂಡು ಬರುತ್ತದೆ. ಇದೇ ರೀತಿಯಲ್ಲಿ ಸಂಸ್ಕೃತ ಶ್ಲೋಕಗಳನ್ನೂ ಒಗ್ಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಾದರೆ ಖಂಡಿತವಾಗಿಯೂ ಒಂದು ಮಿತಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಬಳಸಬಹುದು. ಕೇವಲ ತನಗೆ ಸಂಸ್ಕೃತ ಗೊತ್ತಿದೆ ಎನ್ನುವ ಕಾರಣಕ್ಕೆ ಸಿಕ್ಕಿಸಿಕ್ಕಿದ ಕಡೆಗಳಲ್ಲೆಲ್ಲವೂ ಅದನ್ನು ಬಳಸುವುದು ಒಳ್ಳೆಯ ಪ್ರವೃತ್ತಿಯಲ್ಲ.
ನನಗೆ ಸಂಸ್ಕೃತ ಹೆಚ್ಚು ಗೊತ್ತಿಲ್ಲ. ಆದರೆ ಕೇವಲ ನನಗೆ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಸಂಸ್ಕೃತ ಶ್ಲೋಕಗಳ ಬಳಕೆಯನ್ನು ವಿರೋಧಿಸುವುದೂ ಸರಿಯಲ್ಲ. ವಿರೋಧ ಎಲ್ಲಿ ಎಂದರೆ ಸಂಸ್ಕೃತ ಶ್ಲೋಕಗಳನ್ನು ಹೇಳಬೇಕೆಂಬ ತುಡಿತದಿಂದ ತನಗೆ ಗೊತ್ತಿರದಿದ್ದರೂ ಆ ಶ್ಲೋಕಗಳನ್ನು ಕಂಠಸ್ಥ ಮಾಡಿಕೊಂಡು, ಅದು ಸರಿ ಇದೆಯೋ ಇಲ್ಲವೋ ಎನ್ನುವುದನ್ನು ಸರಿಯಾಗಿ ವಿಮರ್ಶಿಸದೇ ತಪ್ಪು ತಪ್ಪಾಗಿ ಉದ್ಧರಿಸುವ ಬಗೆ ಬೇಕಾಗಿಲ್ಲ. ಮೈಲಿಗೆಯ ದೃಷ್ಟಿಕೋನ ಅಂದರೆ ಸಂಸ್ಕೃತ ಶ್ಲೋಕಗಳನ್ನು ಉಪಯೋಗಿಸಲೇ ಬಾರದೆನ್ನುವ ಧೋರಣೆಯೂ ಬೇಡ.
ದೊಡ್ಡ ದೊಡ್ಡ ಅರ್ಥದಾರಿಗಳಾದ ಶೇಣಿಯವರಂಥವರು ತುಂಬಾ ಗಂಭೀರವಾಗಿ ಸಂಸ್ಕೃತ ಶ್ಲೋಕದ ಒಂದು ಅಥವಾ ಎರಡು ಶಬ್ದಗಳ ಮೂಲಕ ಭಾವವನ್ನು ಮಾತ್ರ ಅನ್ವಯಾನುವಾದ ಮಾಡುವ ಬಗೆ ಬಹಳ ಚಂದ. ಉದಾಹರಣೆಗೆ ನಹಿ ಜ್ಞಾನೇನ ಸದೃಶಂ ಎನ್ನುವುದನ್ನು ಮಾತ್ರ ಹೇಳಿ ಮತ್ತೆ ಆ ಶ್ಲೋಕದ ಭಾವಾರ್ಥವನ್ನು ವಿವರಿಸುವ ಕ್ರಮ. ಇದು ಬಹಳ ಒಳ್ಳೆಯದು.
ಕಟೀಲು ಸಿತ್ಲ: ಅರ್ಥಗಾರಿಕೆಯಲ್ಲಿ ದಾಸರ ಪದಗಳ ಸೊಲ್ಲುಗಳು, ವಚನಕಾರರ ವಚನಗಳನ್ನು, ಮಂಕುತಿಮ್ಮನ ಕಗ್ಗವನ್ನು ಉಪಯೋಗಿಸಬಹುದೇ?
ವಾಸುದೇವ ರಂಗಾ ಭಟ್ಟ: ಬಳಸಬಹುದು. ಆದರೆ ಆಶಯಗಳನ್ನು ಮಾತ್ರ ವ್ಯಾಖ್ಯಾನದ ಸ್ವರೂಪದಲ್ಲಿ ಬಳಸಿಕೊಳ್ಳಬಹುದು. ಅದೂ ಕೂಡ ಆ ಪಾತ್ರಕ್ಕೆ, ಸನ್ನಿವೇಶಕ್ಕೆ ಪೂರಕ ಎನ್ನುವ ಹಾಗಿದ್ದಾಗ ಮಾತ್ರ. ಆದರೆ ಇದ್ದದ್ದನ್ನು ಇದ್ದ ಹಾಗೆ ಬಳಸುವುದು ಅಷ್ಟು ಸಮಂಜಸವಲ್ಲ. ಉದಾಹರಣೆಗೆ ಯೋಗಕ್ಷೇಮಂ ವಹಾಮ್ಯಹಂ ಎನ್ನುವ ಶ್ರೀಕೃಷ್ಣನ ಬಹು ಜನಪ್ರಿಯವಾದ ಮಾತು ಭಗವದ್ಗೀತೆಯಲ್ಲಿ ಹೇಳಿರುವುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಭಗವಂತ ಯಾವ ಸಂದರ್ಭದಲ್ಲಿಯಾದರೂ ಹೇಳಬಹುದಾದ ಮಾತಿದು. ಆದರೆ ಇದನ್ನು ಭೀಷ್ಮ ಪರ್ವಕ್ಕಿಂತ ಮೊದಲಿನ ಪ್ರಸಂಗಗಳಲ್ಲಿ ಬಳಸುವುದಿಲ್ಲ. ಅದರ ಆಶಯವನ್ನು ಮಾತ್ರ ಹೇಳುತ್ತಾರೆ. ಯಾಕೆ ಹೇಳುವುದಿಲ್ಲ ಎಂದರೆ ಇದು ಭಗವದ್ಗೀತೆಯ ಸೊಲ್ಲು. ಇದು ಶ್ರೀಕೃಷ್ಣ ಸಂಧಾನ ಪ್ರಸಂಗದ ಸಮಯದಲ್ಲಿ ಇನ್ನೂ ಆಗಿರಲಿಲ್ಲ.
ಕರ್ಮಣ್ಯೇ ವಾಧಿಕಾರಸ್ಥೇ ಮಾಫಲೇಶು ಕದಾಚನ ಎನ್ನುವ ಮಾತೂ ಕೂಡ ಯಾವಾಗ ಬೇಕಾದರೂ ಹೇಳಬಹುದು. ನಮ್ಮ ಭಾರತೀಯ ಪರಂಪರೆಯಲ್ಲಿ ಇದ್ದದ್ದೇ ಇದು. ಉಪನಿಷತ್ತಿನ ಸಾರವೇ ಹೌದು. ಸರ್ವೋಪನಿಷತ್ತುಗಳನ್ನು ಗೋವಾಗಿಸಿಕೊಂಡು ನಾನು ಕರೆದದ್ದೇ ಈ ಭಗವದ್ಗೀತೆ ಎಂದು ಶ್ರೀಕೃಷ್ಣನೇ ಹೇಳಿದ್ದಾನೆ.  ಗೀತೆಯಲ್ಲಿಯೇ ಹೇಳಲಾಗಿದೆ. ಆದರೆ ಇದನ್ನು ಹೇಳಿದ ಕೂಡಲೇ ಭಗವದ್ಗೀತೆ ಆಗುವ ಮೊದಲು ಇದನ್ನು ಪಾತ್ರಧಾರಿ ಹೇಗೆ ಉಪಯೋಗಿಸಿದ ಎನ್ನುವ ಪ್ರಶ್ಣೆಗಳು ಪ್ರೇಕ್ಷಕರಲ್ಲಿ ಮೂಡುತ್ತದೆ. ಆದ ಕಾರಣ ಅದರ ಭಾವವನ್ನು ಮಾತ್ರ ವಿಶ್ಲೇಶಿಸುತ್ತಾ ಹೋದರೆ ಚಂದ.
ಈ ತೊಡಕು ವಚನಗಳಿಗೆ, ದಾಸರ ಪದಗಳ ಬಳಸುವಿಕೆಯಲ್ಲಿ ಇದೆ. ಯಾಕೆಂದರೆ ಇವುಗಳ ಭಾಷೆ, ಶಬ್ದಪ್ರಯೋಗಗಳು, ಪ್ರಸ್ತುತಿಯ ಶೈಲಿ ಇವಿಗಳನ್ನು ನಮ್ಮ ಪೌರಾಣಿಕ ಆವರಣಕ್ಕೆ ಒಗ್ಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಈ ವಿವೇಚನೆ ಅರ್ಥದಾರಿಯಲ್ಲಿರಬೇಕು. ಒಗ್ಗಿಸಿಕೊಳ್ಳುವುದಕ್ಕೆ ಸಾಮರ್ಥ್ಯವಿದೆ ಎಂದಾದರೆ ಖಂಡಿತ ಉಪಯೋಗಿಸಿಕೊಳ್ಳಬಹುದು.
ಒಂದು ಕಾಲಘಟ್ಟದ ಕಲಾಪ್ರಸ್ತುತಿಯನ್ನು ಪ್ರದರ್ಶಿಸುವಾಗ ಆ ಕಾಲಘಟ್ಟಕ್ಕಿಂತ ಮುಂದಿನ ಕಾಲದ ಘಟನೆಗಳನ್ನು, ಮಾತುಗಳನ್ನು ತರುವುದು ಕಲೆಯ ಸ್ವರೂಪಕ್ಕೆ ದೊಡ್ಡ ದೋಷ ಎಂದು ಕಲಾವಿಮರ್ಶಕರಾದ ಎ. ಈಶ್ವರಯ್ಯನವರು ಹೇಳುವುದನ್ನು ನಾನು ಕೇಳಿದ್ದೇನೆ. ಪಾಶ್ಚಾತ್ಯ ವಿಮರ್ಶೆಯಲ್ಲಿ  anachronism ಅಂದರೆ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಜಿಗಿಯುವುದು ಅಥವಾ ಲಂಘನ ಮಾಡುವುದು ಎನ್ನುತ್ತಾರೆ. ನಮ್ಮ ಭಾರತೀಯ ವಿಮರ್ಶೆಯಲ್ಲಿ ಅದನ್ನು ಇನ್ನೂ ಅಷ್ಟು ಗಂಭೀರವಾಗಿ ಯಾವ ಕಲೆಗಳಲ್ಲಿಯೂ ತೆಗೆದುಕೊಂಡಿದ್ದನ್ನು ನಾನು ಕಂಡಿಲ್ಲ.
ಹಾಗೆಂದು ಶೇಣಿಯವರು ಪೌರಾಣಿಕ ಕಾಲದಿಂದ ಈಗಿನ ಪ್ರಸಕ್ತ ಕಾಲಕ್ಕೆ ಲಂಘಿಸಿದರೂ ಆ ಲಂಘನ ಗೊತ್ತಾಗದ ಹಾಗೆ ಆ ಕಾಲದೊಂದಿಗೆ ಮತ್ತು ಆ ಪಾತ್ರದೊಂದಿಗೆ ಅಷ್ಟು ಎರಕವಾಗಿ ಬರುತ್ತಿತ್ತು. ಉದಾಹರಣೆಗೆ ಎಮರ್ಜೆನ್ಸಿ ಘೋಷಣೆಯ ಕಾಲ. ಅಂದರೆ ಮರುದಿನ ಎಮರ್ಜೆನ್ಸಿ ಘೋಷಣೆಯಾಗುತ್ತದೆ ಎನ್ನುವ ವರ್ತಮಾನಗಳಿತ್ತು. ಆಗ ಶೇಣಿಯವರು ಮಾಗಧನ ಅರ್ಥದ ಪ್ರಾರಂಭಕ್ಕೆ ದಿನಬೆಳಗಾದರೆ ಏನಾಗುತ್ತದೆ ಎಂದು ಎಲ್ಲರಿಗೂ ಆತಂಕ ಎಂದು ತೊಡಗಿದರು. ಇಲ್ಲಿ ಈ ಮಾತು ಅದು ಪಾತ್ರದ ಮಾತೂ ಹೌದು, ಸನ್ನಿವೇಶವೂ ಹೌದು. ಇಷ್ಟು ಎರಕಗೊಂಡು ಈ ಕಾಲದ ಲಂಘನೆ ಬಂದರೆ ಅಡ್ಡಿಯಿಲ್ಲ.
ಕಟೀಲು ಸಿತ್ಲ: ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ವಾದ-ವಿವಾದಗಳು ಸ್ವಾಭಾವಿಕವಾದರೂ ಅದು ಔಚಿತ್ಯವನ್ನು ಮೀರಿದಾಗ ಅದರಿಂದ ಪ್ರಯೋಜನವೇನು?
ವಾಸುದೇವ ರಂಗಾ ಭಟ್ಟ: ವಾದ ವಿವಾದದಲ್ಲಿ ಪರ್ಯಾವಸಾನ ಆಗುವುದರಿಂದ ಯಾವ ರಸಾವಿಷ್ಕಾರದ ಸಿದ್ಧಿಯೂ ಸಾಧ್ಯವಿಲ್ಲ, ಮತ್ತೆ ಅದನ್ನು ಸರಿ ಎಂದು ಯಾರೂ ಸಮರ್ಥಿಸುವುದಕ್ಕೂ ಸಾಧ್ಯವಿಲ್ಲ. ತಾಳಮದ್ದಳೆಯ ಸ್ವರೂಪಕ್ಕೆ ವಾದ ಅಪೇಕ್ಷಿತ. ತಾಳಮದ್ದಳೆಯ ಆಕರ್ಷಣೆಗಳಲ್ಲಿ ಇದೂ ಕೂಡ ಒಂದು ಪ್ರಮುಖ ಅಂಗ. ಆದರೆ ಆ ವಾದದ ಹದ ಯಾವುದಾಗಿರಬೇಕು ಎನ್ನುವುದನ್ನು ಪಾತ್ರಧಾರಿ ತನ್ನ ವಿವೇಚನೆಯಿಂದ ತಿಳಿದುಕೊಂಡಿರಬೇಕು. ವೈಯಕ್ತಿಕವಾದ ಅಹಮಿಕೆಯೇ ಕಾರಣವಾಗಿ, ತಾನು ಹೇಳಿದ್ದನ್ನು ಎದುರು ಪಾತ್ರಧಾರಿ ಒಪ್ಪಿಕೊಳ್ಳಲೇಬೇಕೆನ್ನುವ, ಮತ್ತು ಎದುರು ಪಾತ್ರಧಾರಿಯ ಯಾವ ಮಾತನ್ನೂ ತಾನು ಒಪ್ಪುವುದಿಲ್ಲವೆನ್ನುವ ಮನೋಭಾವದ ವಾದ ಕೊನೆಗೆ ವಿವಾದದಲ್ಲಿಯೇ ಕೊನೆಗೊಳ್ಳುತ್ತದೆ. ವಾದಗಳು ವಿವಾದವಾದರೆ ಅದು ವೈಯಕ್ತಿಕವಾದ ಪಾತ್ರಧಾರಿಯ ದೋಷವೇ ಹೊರತು ವಿಷಯಾಧಾರಿತ ವಾದದಿಂದ ವಿವಾದಗಳು ಆಗುವುದು ಕಡಿಮೆ. ಕೆಲವೊಮ್ಮೆ ಗ್ರಹಿಕೆಯಲ್ಲಿನ ದೋಷದಿಂದಲೂ ವಾದ ವಿವಾದಕ್ಕೆಡೆಮಾಡಿಕೊಡುತ್ತದೆ.
ಉದಾಹರಣೆಗೆ ಶರಸೇತು ಬಂಧನ ಪ್ರಸಂಗದಲ್ಲಿ ಸುರಪನೈರಾವತವ ತರಿಸಿಹೆ ಎನ್ನುವ ಅರ್ಜುನನ ಪದವಿದೆ. ಬಹಳ ದೊಡ್ಡ ಅರ್ಥದಾರಿಗಳ ಮಧ್ಯೆ ನಡೆದ ವಾದವಿದು. ಅರ್ಜುನನ ಪಾತ್ರಧಾರಿ ಅದನ್ನು ಹೇಳಿದಾಗ, ಹಾಗೆ ಏಣಿಯಲ್ಲಿ ಐರಾವತವನ್ನು ತರಲು ಸಾಧ್ಯವೇ? ಇಚ್ಛಾಮಾತ್ರದಿಂದ ಗಮನ ಸಾಮರ್ಥ್ಯವಿರುವ ಐರಾವತವನ್ನು ಏಣಿಯಲ್ಲಿ ತರಬೇಕು ಯಾಕೆ ಎನ್ನುತ್ತಾ ಹನೂಮಂತ ಪಾತ್ರಧಾರಿ ಆ ಘಟನೆ ನಡೆದೇ ಇಲ್ಲವೆನ್ನುವಂತೆ ವಾದಿಸತೊಡಗಿದರು. ಅರ್ಜುನನ ಪಾತ್ರಧಾರಿಗೆ ಆ ಘಟನೆ ನಡೆದಿದೆ ಎಂದು ಸಾಧಿಸಬೇಕಾದದ್ದು ಪ್ರಸಂಗದ ಪದ್ಯದ ಅಗತ್ಯ. ಆ ವಾದ ಬೆಳೆದು ಬೆಳೆದು ಕೊನೆಗೆ ಅರ್ಜುನ ಪಾತ್ರಧಾರಿ ಪ್ರಸಂಗದಲ್ಲಿ ಇದ್ದದ್ದನ್ನು ನಾನು ಹೇಳಿದ್ದು ಎಂದು ಅರ್ಜುನ ಪಾತ್ರಧಾರಿ ಹೇಳುವಲ್ಲಿಯವರೆಗೆ. ಅದು ಹೌದು ಆದರೆ ಅದನ್ನು ಒಪ್ಪಿಕೊಳ್ಳಲಿಕ್ಕೆ ಹನೂಮಂತನಿಗೆ ಪದ್ಯ ಇಲ್ಲವಲ್ಲ ಎಂದು ಹನೂಮಂತ ಪಾತ್ರಧಾರಿ ಹೇಳಿದರು. ಇದು ಇಬ್ಬರು ಬಲು ದೊಡ್ಡ ಕಲಾವಿದರುಗಳ ನಡುವೆ ನಡೆದ ವಾದ. ವಿವಾದದಲ್ಲಿ ಮುಗಿಯಿತು. ಹನೂಮಂತ ಪಾತ್ರಧಾರಿಯಾದವರ ವಾದದ ನಡೆ ಅಹಂನಿಂದ ಕೂಡಿತ್ತು. ಯಾಕೆಂದರೆ ಹನೂಮಂತ ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳಲಿಕ್ಕೆ ಅರ್ಜುನನಿಗೂ ಪದ್ಯವಿಲ್ಲ. ಒಂದು ಪಾತ್ರ ಹೇಳಿದ್ದನ್ನು ಒಪ್ಪುವಂತಹ ಪದವಿಲ್ಲದಿದ್ದರೆ ಅದನ್ನು ವಿರೋಧಿಸಬೇಕೆನ್ನುವ ಧೋರಣೆಯಲ್ಲಿ ತಾಳಮದ್ದಳೆ ಮುಂದುವರೆದರೆ ಯಾವ ತಾಳಮದ್ದಳೆಯೂ ಮುಗಿಯಲಿಕ್ಕಿಲ್ಲ.
ನನಗೆ ತಿಳಿದಿರುವಂತೆ ವಾದ ವಿವಾದದಲ್ಲಿ ಮುಗಿದ ಹೆಚ್ಚಿನ ತಾಳಮದ್ದಳೆಗಳು ಆರೋಗ್ಯಕರ ಚರ್ಚೆಯಿಂದ ನಿಂತದ್ದಲ್ಲ, ಮತ್ತು ಹಾಗೆ ನಿಲ್ಲಲೂ ಸಾಧ್ಯವಿಲ್ಲ. ವೈಯಕ್ತಿಕ ಆಗ್ರಹಗಳು, ಗುಪ್ತವಾದ ಕಾರ್ಯಸೂಚಿಗಳು, ಅಹಮಿಕೆಗಳು ಕಾರಣವಾಗಿಯೇ ಅರ್ಧದಲ್ಲಿ ನಿಂತಿರುವಂಥದ್ದು.
ಕಟೀಲು ಸಿತ್ಲ: ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಸ್ತ್ರೀ ಪಾತ್ರಗಳಿಗೆ ಇರುವ ಸವಾಲುಗಳೇನು? ಸ್ತ್ರೀ ಪಾತ್ರಕ್ಕೆ ಹೆಚ್ಚು ವ್ಯಾಪ್ತಿಯೂ ಇಲ್ಲ ಎನ್ನುವ ಒಂದು ಕಾರಣವೂ ಇದ್ದು ಸ್ತ್ರೀ ಪಾತ್ರಧಾರಿ ಬೆಳೆಯಲೂ ಕಷ್ತದಾಯಕವಾಗಿರುವಾಗ ಸ್ತ್ರೀ ಪಾತ್ರವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಬಗೆ ಹೇಗೆ?
ವಾಸುದೇವ ರಂಗಾ ಭಟ್ಟ: ಸ್ತ್ರೀ ಪಾತ್ರ ನಿರ್ವಹಣೆಗೆ ಮೂಲಭೂತವಾಗಿ ಬೇಕಾಗಿರುವುದು ಅದಕ್ಕೆ ಒಗ್ಗುವ ಸ್ವರಭಾರ.  ಪಾತ್ರವನ್ನು ಅಭಿವ್ಯಕ್ತಿಸುವಲ್ಲಿ ತನ್ನ ಅಭಿವ್ಯಕ್ತಿ ಶೈಲಿಯ ಪೂರಕತೆ. ಈ ರೀತಿಯಲ್ಲಿ ಸ್ತ್ರೀ ಪಾತ್ರವನ್ನು ನಿರ್ವಹಿಸುವವರ ಸಂಖ್ಯೆ ಕಡಿಮೆ ಇರುವುದರಿಂದ ಒಬ್ಬ ಒಮ್ಮೆ ಸ್ತ್ರೀ ಪಾತ್ರ ಹೇಳಲು ತೊಡಗಿದ ಎಂದಾದರೆ ಮತ್ತೆ ಆ ಕಲಾವಿದ ಸ್ತ್ರೀ ಪಾತ್ರಕ್ಕೆಯೇ ಬ್ರಾಂಡ್ ಆಗಿ ಬಿಡುತ್ತಾನೆ. ತಾಳಮದ್ದಳೆ ಕ್ಷೇತ್ರದಲ್ಲಿ ಸ್ತ್ರೀ ಪಾತ್ರ ಮಾಡುತ್ತಿದ್ದವರೇ ಇನ್ನು ನಾನು ಸ್ತ್ರೀ ಪಾತ್ರವನ್ನು ಹೇಳುವುದಿಲ್ಲ ಎಂದ ಉದಾಹರಣೆಗಳೂ ಇವೆ. ಯಾಕೆ ಹಾಗೆ ಹೇಳುತ್ತಾರೆಂದರೆ ಆ ಸ್ತ್ರೀ ಪಾತ್ರಗಳಿಗೇ ಬ್ರಾಂಡ್ ಆಗಿ ಬಿಡುವ ಭಯ.  ಎಲ್ಲಾ ಪಾತ್ರಧಾರಿಗಳಿಗೂ ತಾವು ಬೇರೆ ಬೇರೆ ಪಾತ್ರಗಳ ಅರ್ಥವನ್ನು ಹೇಳಿ ತಾನು ಬೆಳೆಯುತ್ತಾ ಪಕ್ವಗೊಳ್ಳಬೇಕು ಎನ್ನುವ ಅಭಿಲಾಷೆ ಇರುತ್ತದೆ. ಸಹಜವಾದ ಮಹತ್ವಾಕಾಂಕ್ಷೆ, ಅದಕ್ಕಾಗಿ ಸ್ತ್ರೀ ಪಾತ್ರಗಳನ್ನು ನಿರಾಕರಿಸುತ್ತಾರೆ.
ಸ್ತ್ರೀ ಪಾತ್ರಗಳನ್ನೇ ಹೇಳಬೇಕು ಎನ್ನುವ ಅಭಿಲಾಷೆಯುಳ್ಳವರೂ ಇದ್ದಾರೆ. ಅವರು ಸ್ವರವನ್ನು ಸ್ತ್ರೀ ಪಾತ್ರಗಳಿಗೆ ಒಗ್ಗಿಸಿಕೊಳ್ಳಬೇಕು. ಸ್ವಭಾವ ಚಿತ್ರಣವನ್ನು ಮಾಡುವಾಗ ಆ ಸ್ತ್ರೀತ್ವ ಪ್ರಕಟವಾಗುವ ಹಾಗೆ ನೋಡಿಕೊಳ್ಳಬೇಕು. ಸ್ತ್ರೀ ಪಾತ್ರಗಳ ಇನ್ನೊಂದು ಸವಾಲು ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳಲ್ಲಿ ಪೌರಾಣಿಕ ಪ್ರಸಂಗಗಳೇ ಯುಕ್ತ ಎನ್ನುವ ಧೋರಣೆಯೊಟ್ಟುಕೊಂಡು ಮಾತಾಡುವಾಗ ಪೌರಾಣಿಕ ಪ್ರಸಂಗಗಳಲ್ಲಿನ ಸ್ತ್ರೀ ಪಾತ್ರಗಳನ್ನು ಪ್ರಸ್ತುತಪಡಿಸುವಾಗ ಈ ಕಾಲಘಟ್ಟದಲ್ಲಿ ಹುಟ್ಟಬಹುದಾದ ಪ್ರಶ್ಣೆಗಳು ಅಸಂಖ್ಯ. ಆ ಪ್ರಶ್ನೆಗಳೆಲ್ಲವನ್ನೂ ಉತ್ತರಿಸಬೇಕು ಎಂದೇನಿಲ್ಲ, ಆದರೆ ಆ ಪ್ರಶ್ಣೆಗಳ ಅರಿವಿರಬೇಕು. ಸ್ತ್ರೀ ಪಾತ್ರಕ್ಕೆ ಮಾತ್ರ ಇವುಗಳ ಅರಿವಿರಬೇಕು ಅಂತಲ್ಲ. ಆದರೆ ಸ್ತ್ರೀ ಪಾತ್ರಗಳಿಗೆ ಇದರ ಅರಿವು ಹೆಚ್ಚು ಇರಬೇಕು.  ತಾಳಮದ್ದಳೆಯಲ್ಲಿ ಬಹಳ ಮುಖ್ಯವಾಗಿ ಪೌರಾಣಿಕ ಆವರಣದ ಒಳಗಡೆಯಲ್ಲಿಯೇ ಇಂದಿನ ಸ್ಥಿಯನ್ನು ಸಮನ್ವಯ ಮಾಡುವ ದೃಷ್ಟಿ ಬಹಳ ಮುಖ್ಯ.
ಕಟೀಲು ಸಿತ್ಲ: ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಭಾಗವತರು ಹಾಡುವಾಗ ಪಾತ್ರಧಾರಿಯೂ ಹಾಡುವುದು, ಅಭಿನಯಿಸುವುದು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ವಾಸುದೇವ ರಂಗಾ ಭಟ್ಟ: ಮಿತವಾಗಿದ್ದರೆ ಎಲ್ಲವೂ ಒಳ್ಳೆಯದು. ಮತ್ತು ಪದವನ್ನು ಹೇಳುವುದರಲ್ಲಿ ಮತ್ತು ಅಭಿನಯಿಸುವುದರಲ್ಲಿ ಔಚಿತ್ಯವಿದೆ. ಭಾಗವತರು ಹಾಡುವ ಪದ್ಯಗಳು ಪಾತ್ರದ ಮಾತುಗಳು. ಭಾಗವತರ ಪದ್ಯ ಬೇರೆ, ಅರ್ಥ ಬೇರೆ ಅಂತ ಆಗುವುದನ್ನು ತಪ್ಪಿಸಿಕೊಳ್ಳಲು ಮತ್ತು ಭಾಗವತರು ಹಾಡುತ್ತಿರುವುದು ತನ್ನ ಮಾತು ಎನ್ನುವ ಅನನ್ಯತೆಯನ್ನೋ, ಅನ್ಯೋನ್ಯತೆಯನ್ನೋ ಸ್ಥಾಪಿಸುವ ದೃಷ್ಟಿಯಿಂದ ಪಾತ್ರಧಾರಿಗಳು ಸ್ವಲ್ಪ ಹಾಡುವುದೋ, ಅಭಿನಯವೋ ಮಾಡಿದರೆ ತಪ್ಪಲ್ಲ. ಆದರೆ ಹೇಳುವವರಿಗೆ ರಾಗಜ್ಞಾನ, ಶೃತಿಜ್ಞಾನ, ಭಾಗವತರ ಹಾಡಿಗೆ ತನ್ನ ಹಾಡಿನಿಂದ ತೊಂದರೆಯಾಗಬಾರದು ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡು ಸಾಧ್ಯವಿದ್ದವರು ಮಾತ್ರ ಹೇಳಬೇಕು.
ಕಟೀಲು ಸಿತ್ಲ: ತಾಳಮದ್ದಳೆಯಲ್ಲಿ ಉದ್ದ ಪದಗಳು, ಅತಿಯಾದ ಆಲಾಪನೆ ಇವುಗಳಿಂದ ರಸಾಭಾಸವಲ್ಲವೇ?
ವಾಸುದೇವ ರಂಗಾ ಭಟ್ಟ: ಅಸಮತೋನಲ ಎನ್ನುವುದು ಯಾವ ಕಾಲಕ್ಕೂ ತಪ್ಪೇ. ಯಾರು ಮಾಡಿದ್ದಾರೆ ಎನ್ನುವುದಕ್ಕಿಂತಲೂ ಆ ಅಸಮತೋಲನ ಎನ್ನುವ ವಿಷಯವೇ ಯಾರು ಮಾಡಿದ್ದರೂ ತಪ್ಪೇ.
ಕಟೀಲು ಸಿತ್ಲ: ಪ್ರದರ್ಶನಗಳಿಗೆ ಕಲಾ ವಿಮರ್ಶೆ ಬೇಕೆ?
ವಾಸುದೇವ ರಂಗಾ ಭಟ್ಟ: ಕಲಾವಿಮರ್ಶೆ ಖಂಡಿತವಾಗಿಯೂ ಬೇಕು. ಯಾರು ತಾಳ್ಮೆಯಿಂದ ಒಂದು ಪ್ರದರ್ಶನವನ್ನು ನೋಡಿದ್ದಾನೆಯೋ ಆತ ಆ ಪ್ರದರ್ಶನವನ್ನು ವಿಮರ್ಶೆ ಮಾಡಬಹುದು. ಅದನ್ನು ವಿಮರ್ಶೆ ಅನ್ನುವುದಕ್ಕಿಂತಲೂ ತನ್ನ ಅನಿಸಿಕೆಯ ಅಭಿವ್ಯಕ್ತಿ ಎನ್ನಬಹುದು. ತಮ್ಮ ತಮ್ಮ ಅನಿಸಿಕೆಯ ಅಭಿವ್ಯಕ್ತಿಯನ್ನು ಮಾಡಲೂ ಬೇಕು. ಆತ ದೊಡ್ಡ ವಿಮರ್ಶಕನೋ? ಆವನಿಗೇನು ಗೊತ್ತಿದೆ ಕಲೆಯ ಬಗ್ಗೆ ಎನ್ನುವುದಾಗಿ ಕೆಲವು ಕಲಾವಿದರು ಹೇಳುವುದನ್ನು ಕೇಳಿದ್ದೇನೆ. ಈ ರೀತಿ ತಪ್ಪು. ಆತ ಅವನ ವಿವೇಚನೆಗೆ ಸರಿಯಾಗಿ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾನೆ. ಒಂದು ವೇಳೆ ಅವನ ವಿವೇಚನೆಗಿಂತಲೂ ನಮ್ಮ ವಿವೇಚನೆ ಪಕ್ವವಾಗಿದ್ದರೆ, ಆ ಅನಿಸಿಕೆ ಅಪರಿಪಕ್ವ ಎನ್ನುವುದಾಗಿ ಪರಿಗಣಿಸಿ ಬಿಟ್ಟು ಬಿಡಬಹುದು. ಒಂದು ವೇಳೆ ಆ ಅನಿಸಿಕೆ ಸರಿಯೆಂದು ಕಂಡರೆ ನಾವು ಕಲಾವಿದರು ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ನಾವು ಒಂದು ಪ್ರದರ್ಶನವನ್ನು ಕೊಟ್ಟ ಬಳಿಕ ಆ ಪ್ರದರ್ಶನವೆಂಬುದು ನೋಡಿದವರ ಮತ್ತು ಕೇಳಿದವರ ಸೊತ್ತೇ ಹೊರತು ನಮ್ಮದಲ್ಲ. ನನ್ನ ಅರ್ಥವನ್ನು ನನ್ನ ವೇಷವನ್ನು ವಿಮರ್ಶೆಮಾಡುವುದಕ್ಕೆ ಇವನ್ಯಾರು ಎಂದು ಕೇಳುವ ಹಾಗಿಲ್ಲ. ಯಾಕೆಂದರೆ ಹಾಗೆ ಅನಿಸಿಕೆ ವ್ಯಕ್ತಪಡಿಸಿರುವ ಆತನನ್ನೂ ಸೇರಿಸಿ ನಾವು ಪ್ರದರ್ಶನ ಕೊಟ್ಟಿರುವಂಥದ್ದು. ಆದುದರಿಂದ ಅವನ ಅಭಿಪ್ರಾಯವನ್ನು ಅವನಿಗೆ ಹೇಳುವ ಸ್ವಾತಂತ್ರ್ಯ ಅವನಿಗಿದ್ದೇ ಇದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಪ್ರಶ್ಣಿಸುವಂತಿಲ್ಲ. ಮತ್ತೆ ಅತಿರೇಕಗಳು ಆಗುವುದೇ ಪ್ರೇಕ್ಷಕರ ಮೌನದಿಂದ. ನಿರ್ಭಿಡೆಯಿಂದ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳುವ ಸದಭಿರುಚಿಯ ಪ್ರೇಕ್ಷಕರು ಹೆಚ್ಚಿದರೆ ಕಲಾವಿದರ ಅತಿರೇಕದ ವರ್ತನೆಗೂ ಕಡಿವಾಣ ಬಿದ್ದೀತು. ಅಂದರೆ ಕೆಟ್ಟದ್ದು ಎಲ್ಲೆಡೆಯಲ್ಲಿಯೂ ಪ್ರಶ್ಣಿಸಲ್ಪಟ್ಟಾಗ ನಿಧಾನಕ್ಕೆ ಅದು ಇಲ್ಲವಾಗುತ್ತದೆ. ಹಾಗಲ್ಲದೇ ನಮಗ್ಯಾಕೆ ಬೇಕು ಎನ್ನುವುದಾಗಿ ಪ್ರೇಕ್ಷಕರು ಸುಮ್ಮನುಳಿಯುತ್ತಾ ಬಂದರೆ ಎಲ್ಲ ಕಡೆಗಳಲ್ಲಿಯೂ ಆ ಕೆಟ್ಟದ್ದು ವಿಜೃಂಭಿಸುತ್ತಾ ಸಾಗುತ್ತದೆ.
ಇಡಿಯ ಪ್ರದರ್ಶನವನ್ನು ಸಂಪೂರ್ಣ ನೋಡಬೇಕೆಂದೂ ಇಲ್ಲ. ತಾನು ನೋಡಿದಷ್ಟರ ಬಗೆಗಿನ ಅಭಿಪ್ರಾಯವನ್ನು ಧಾರಾಳ ವ್ಯಕ್ತಪಡಿಸಬಹುದು. ತಾನು ಎಷ್ಟು ನೋಡಿದ್ದಾನೆಯೋ ಅಷ್ಟರ ಬಗ್ಗೆ ಆತ ತನ್ನ ಅಭಿಪ್ರಾಯ ಹೇಳುವುದಕ್ಕೆ ಸಮರ್ಥನೇ. ಅಂದರೆ ಅದನ್ನು ಆ ಪ್ರದರ್ಶನವನ್ನು ನೋಡಿರಬೇಕು. ಅದನ್ನು ನೋಡದೇ, ಪ್ರದರ್ಶನದ ಸಮಯದಲ್ಲಿ ಚೌಕಿಯಲ್ಲಿದ್ದುಕೊಂಡು ಆ ಮತ್ತೆ ಯಾರೋ ಹೇಳಿದ್ದನ್ನು ಕೇಳಿ ವಿಮರ್ಶೆ ಮಾಡುವುದು ಉದ್ಧಟತನವೋ, ಅಧಿಕಪ್ರಸಂಗವೋ ಆಗುತ್ತದೆ.
ಆದ ಕಾರಣ ವಿಮರ್ಶೆ ಎನ್ನುವುದು ಬೇಕೇ ಬೇಕು. ಮೂಲತಃ ಕಲೆಯ ಕುರಿತಾದ ಸಹಾನುಭೂತಿ, ನೋಡುವ ತಾಳ್ಮೆ ಇದು ಇದ್ದವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಪಯೋಗಿಸಿ ತಮ್ಮ ಅನಿಸಿಕೆಯನ್ನು ಹೇಳಿದರೆ ಅಂತಹ ಅಭಿಪ್ರಾಯವನ್ನು ಹೇಳಲೇ ಕೂಡದು ಎಂದು ಯಾರೂ ಖಂಡಿಸುವ ಹಾಗಿಲ್ಲ.
ಕಟೀಲು ಸಿತ್ಲ: ತಾಳಮದ್ದಳೆಗೆ ಸರಿಮಿಗಿಲಾದ ಇತರ ಯಾವುದಾದರೂ ಕಲೆ ಇದೆಯೇ?
ವಾಸುದೇವ ರಂಗಾ ಭಟ್ಟ: ಸರಿಮಿಗಿಲು ಅಂತ ಅಲ್ಲ. ತುಲನಾತ್ಮಕವಾಗಿ ಅದು ಶ್ರೇಷ್ಟ, ಇದು ಕನಿಷ್ಟ ಎನ್ನುವುದು ತಪ್ಪಾಗುತ್ತದೆ. ಭಾರತೀಯ ರಂಗ ಕಲೆಗಳಲ್ಲಿ ಪಾರಸ್ಪರಿಕವಾಗಿ ಕೊಡು ಕೊಳ್ಳುವಿಕೆಯ ಮತ್ತು ಪ್ರಭಾವಕ್ಕೊಳಗಾಗುವ ಹಾಗೂ ಪ್ರಭಾವವನ್ನು ಬೀರುವ ಗುಣವಿದೆ. ಗಮಕ ಮತ್ತು ಹರಿಕಥೆ ತಾಳಮದ್ದಳೆ ಕ್ಷೇತ್ರದ ಮೇಲೆ ಪ್ರಭಾವವನ್ನು ಬೀರಿದೆ. ಗಮಕ ಕಲೆಯ ವಾಚನ-ವ್ಯಾಖ್ಯಾನ, ಹರಿಕಥೆಯ ವ್ಯಾಖ್ಯಾನ ಮತ್ತದರ ವಿಸರಣೆ. ತಾಳಮದ್ದಳೆಯಲ್ಲಿನ ವ್ಯಾಖ್ಯಾನಗಳಿಗೆ ಒಂದು ವಿಸ್ತಾರ ಒದಗಿದ್ದು ಬಹುಷ ಹರಿಕಥೆಯಿಂದಲೂ ಇರಬಹುದು. ಅನೇಕ ಹರಿದಾಸರುಗಳು ಯಕ್ಷಗಾನ ಕ್ಷೇತ್ರಕ್ಕೆ ಬಂದು ತುಂಬ ಕೊಡುಗೆಯನ್ನು ಕೊಟ್ಟಿದ್ದಾರೆ. ಅತಿವಿಸ್ತಾರ ಎನ್ನುವ ದೋಷ ನುಸುಳಿದ್ದರೂ ಇರಬಹುದು. ಯಾಕೆಂದರೆ ಹರಿಕಥೆ One Man Show.  ಅಲ್ಲಿ ಹರಿದಾಸರೊಬ್ಬರೇ ಎಲ್ಲವನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಆದ ಕಾರಣ ಈ ಒಂದು ದೋಷ ಯಕ್ಷಗಾನ ತಾಳಮದ್ದಳೆಯಲ್ಲಿ ನುಸುಳಿದ್ದರೂ ಇರಬಹುದು.
ಕಟೀಲು ಸಿತ್ಲ:  ಪ್ರಸಂಗ ಒಂದೇ ಆಗಿದ್ದರೂ ಆಟದ ಪ್ರಸಂಗ ಮತ್ತು ಕೂಟದ ಪ್ರಸಂಗ ಎನ್ನುವ ವಿಭಜನೆಗೆ ಕಾರಣವೇನು
ವಾಸುದೇವ ರಂಗಾ ಭಟ್ಟ: ವಿವೇಚನೆಗೆ ಮತ್ತು ವಿಶ್ಲೇಶಣೆಗೆ ಹೆಚ್ಚಿನ ಅವಕಾಶವಿರುವ ಪ್ರಸಂಗಗಳು ಕೂಟದ ಪ್ರಸಂಗ ಎಂದು ಕರೆಸಲ್ಪಟ್ಟಿದೆ. ಎಲ್ಲಾ ಪ್ರಸಂಗಗಳ ತಾಳಮದ್ದಳೆಗೆ ಮಾಡಬಹುದು ಏನೂ ತೊಂದರೆಯಿಲ್ಲ. ಆದರೆ ಕೆಲವು ಪ್ರಸಂಗಗಳಲ್ಲಿ ಕಥೆ ಮತ್ತು ದೃಶ್ಯಗಳೇ ಪ್ರಧಾನವಾಗಿರುತ್ತದೆ. ಪ್ರತಿ ದೃಶ್ಯದಲ್ಲಿ ಪಾತ್ರಗಳು ಕಥೆಗಳು ಶೀಘ್ರವಾಗಿ ಮುಂದುವರೆಯುತ್ತಾ ಹೋಗುತ್ತದೆ. ಅಂತಹ ಪ್ರಸಂಗಗಳು ತಾಳಮದ್ದಳೆಗೆ ಅಷ್ಟು ಸೂಕ್ತವಲ್ಲ.
ತಾಳಮದ್ದಳೆಯಲ್ಲಿ ಜನಪ್ರಿಯವಾದ ಅನೇಕ ಪ್ರಸಂಗಗಳನ್ನು ಅವಲೋಕಿಸಿದರೆ ನಮಗೆ ತಿಳಿಯುತ್ತದೆ. ಅಂತಹ ಪ್ರಸಂಗಗಳಲ್ಲಿ ಭಾವಕ್ಕೆ, ಬುದ್ಧಿಗೆ ಸಮಾನ ಪ್ರಾಶಸ್ತ್ಯವಿದೆ. ಇಂತಹ ಪ್ರಸಂಗಗಳು ತಾಳಮದ್ದಳೆಗೆ ಹೆಚ್ಚು ಒಗ್ಗಿಕೊಳ್ಳುತ್ತದೆ. ಕೇವಲ ಕಥೆ ಮತ್ತು ರಂಗತಂತ್ರಗಳೇ ಮುಖ್ಯವಾಗಿರಬಹುದಾದ ಪ್ರಸಂಗಗಳು ಆಟಕ್ಕೆ ಹೆಚ್ಚು ಸೂಕ್ತ. ಆದುದರಿಂದಲೇ ಈ ವಿಭಜನೆ ಬಂದಿರಲಿಕ್ಕೂ ಸಾಕು.
ಹಾಗೆಂದು ಕೇವಲ ಕಥೆಯೇ ಮುಖ್ಯವಾಗಿದ್ದ ಅನೇಕ ಪ್ರಸಂಗಗಳನ್ನು ತಾಳಮದ್ದಳೆ ಮಾಡಿದಾಗ, ಈ ತಾಳಮದ್ದಳೆ ರೂಪಕ್ಕೂ ಈ ಪ್ರಸಂಗಗಳು ಒಗ್ಗಿಕೊಳ್ಳುತ್ತದೆ ಎಂದು ಅನ್ನಿಸಿದೆ. ಉದಾಹರಣೆಗೆ ಮೇದಿನಿ ನಿರ್ಮಾಣ, ವೀರಮಣಿ ಕಾಳಗ, ಶುಂಭವಧೆ, ಜಾಂಬವತಿ ಕಲ್ಯಾಣ ಇತ್ಯಾದಿ ಉದಾಹರಣೆಗಳನ್ನು ಕೊಡಬಹುದು. ಕೆಲವು ಪ್ರಸಂಗಗಳಿಗೆ ಈ ಸಾಧ್ಯತೆ ಇರುತ್ತದೆ. ಅಂತಹ ಪ್ರಸಂಗಗಳನ್ನು ತಾಳಮದ್ದಳೆಯ ರೂಪಕ್ಕೂ ಒಗ್ಗಿಸಿಕೊಳ್ಳಬಹುದು. ಇನ್ನೂ ಅನೇಕ ಅಂತಹ ಪ್ರಸಂಗಗಳಿರಬಹುದು, ಅಂತಹುದನ್ನು ಶೋಧಿಸಿ ತಾಳಮದ್ದಳೆಯ ರೂಪಕ್ಕೆ ಒಗ್ಗಿಸಿಕೊಂಡು ಪ್ರದರ್ಶನ ಮಾಡಬಹುದು.
ಕಟೀಲು ಸಿತ್ಲ:  ತಾಳಮದ್ದಳೆಯಲ್ಲಿ ಮಾತುಗಾರಿಕೆಯೇ ಮುಖ್ಯ. ಇಲ್ಲಿ ಅತ್ಯುತ್ತಮ, ಉತ್ತಮ, ಸಾಧಾರಣ ಮತ್ತು ಕಳಪೆ ಎಂದು ತೀರ್ಮಾನಿಸಲು ಯಾವ ಮಾನದಂಡವನ್ನು ಉಪಯೋಗಿಸಿಕೊಳ್ಳಬಹುದು?
ವಾಸುದೇವ ರಂಗಾ ಭಟ್ಟ: ಅರ್ಥಗಾರಿಕೆಯ ಮಾನದಂಡವೇ ಅದನ್ನು ನಿರ್ಧರಿಸುತ್ತದೆ. ಭಾಷಾಶುದ್ಧಿ, ಶೃತಿಬದ್ಧತೆ, ಪುರಾಣ ಜ್ಞಾನ, ಪ್ರಸಂಗ ಜ್ಞಾನ, ಪ್ರತ್ಯುತ್ಪನ್ನ ಮತಿತ್ವ, ಪಾತ್ರ ಚಿತ್ರಣ, ಪ್ರಸ್ತುತಿ ಈ ಎಲ್ಲವುಗಳ ಆಧಾರದಲ್ಲಿ ಈ ರೀತಿಯ ಶ್ರೇಣಿಕೃತ ವರ್ಗೀಕರಣವನ್ನು ಮಾಡಬಹುದು.
ಕಟೀಲು ಸಿತ್ಲ:  ಕಾಸರಗೋಡು ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಅರ್ಥದಾರಿಗಳಿಗೂ ಉಡುಪಿ, ಉತ್ತರಕನ್ನಡ ಮತ್ತು ಮಲೆನಾಡು ಪ್ರಾಂತ್ಯದ ಅರ್ಥದಾರಿಗಳಿಗೂ ಗುರುತಿಸಬಹುದಾದ ವ್ಯತ್ಯಾಸಗಳೇನು?
ವಾಸುದೇವ ರಂಗಾ ಭಟ್ಟ: ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಮಲೆನಾಡು ಅಂತ ವಿಭಜಿಸಿದರೆ ಅಲ್ಲಿನ ಅರ್ಥ ಭಾವ ಪ್ರಧಾನವಾಗಿದ್ದರೆ, ಇಲ್ಲಿನ ಅರ್ಥಗಾರಿಕೆ ವೈಚಾರಿಕತೆಯನ್ನು ಪ್ರಧಾನವಾಗಿ ಒಳಗೊಂಡಿದೆ. ವಿಶ್ಲೇಷಣೆ, ವ್ಯಾಖ್ಯಾನಗಳು, ತರ್ಕ, ವಾದಗಳು ಈ ಪ್ರಾಂತ್ಯದ ಅರ್ಥದಾರಿಗಳಲ್ಲಿ ಹೆಚ್ಚು. ಭಾವನಾತ್ಮಕವಾದ ಪ್ರಸ್ತುತಿ ಅಲ್ಲಿ ಹೆಚ್ಚು. ಅದಕ್ಕೆ ಕಾರಣವೆಂದರೆ ಶೇಣಿ ಸಾಮಗರಂತಹ ಅರ್ಥದಾರಿಗಳು ಇಲ್ಲಿ ಹೆಚ್ಚು ಕೃಷಿಯನ್ನು ಮಾಡಿದವರು. ಅಲ್ಲಿ ವೆಂಕಟಾಚಲ ಭಟ್ಟರು ಮೊದಲಾದವರು ಭಾವಪೂರ್ಣವಾಗಿಯೇ ಹೆಚ್ಚು ಪ್ರಸ್ತುತಪಡಿಸುತ್ತಿದ್ದರು.
ಈಗಿನ ಸನ್ನಿವೇಶದಲ್ಲಿ ಇಲ್ಲಿನ ಪ್ರಭಾವ ಅಲ್ಲಿಯೂ ಆಗಿದೆ. ಅಲ್ಲಿನ ಪ್ರಭಾವ ಇಲ್ಲಿಗೂ ಆಗಿದೆ. ಆದುದರಿಂದ ಈ ವ್ಯತ್ಯಾಸಗಳು ಕಡಿಮೆಯಾಗುತ್ತಾ ಬರುತ್ತಿದೆ. ಈ ವ್ಯತ್ಯಾಸಗಳು ಇನ್ನಷ್ಟು ಕಡಿಮೆಯಾಗುತ್ತಾ ಬಂದರೆ ತಾಳಮದ್ದಳೆ ಕ್ಷೇತ್ರ ಮತ್ತಷ್ಟು ಪಕ್ವವಾಗುವುದಕ್ಕೆ ಅವಕಾಶವಿದೆ.
ಕಟೀಲು ಸಿತ್ಲ:  ತಾಳಮದ್ದಳೆ ಕನ್ನಡ ವಾಚಕಲೋಕದ ಬಲುದೊಡ್ಡ ಕೊಡುಗೆಯಾದರೂ, ಸಮಸ್ತ ಕನ್ನಡಿಗರನ್ನು ತಲುಪದೇ ಇರಲು ಕಾರಣವೇನು?
ವಾಸುದೇವ ರಂಗಾ ಭಟ್ಟ: ಇದಕ್ಕೊಂದು ಸಾಂಸ್ಥಿಕ ರೂಪವಿಲ್ಲದಿರುವುದೇ ಕಾರಣ. ಕನ್ನಡ ತಿಳಿದವರಿಗೆ, ವೈಚಾರಿಕ ಪ್ರಪಂಚಕ್ಕೆ, ಪುರಾಣಾಸಕ್ತರಿಗೆ ತಲುಪಿಸಬೇಕೆನ್ನುವ ಅಚಲವಾದ ಧೋರಣೆಯೊಂದಿಗೆ ತಾಳಮದ್ದಳೆಯದ್ದೇ ಆದ ಮೇಳ ಇಟ್ಟುಕೊಂಡು ಕಲಾಪ್ರಸರಣಕ್ಕೆ ತೊಡಗಿಕೊಂಡರೆ ತಾಳಮದ್ದಳೆಯನ್ನು ಕರ್ನಾಟಕದಾದ್ಯಂತ ಪ್ರಸರಿಸಬಹುದು. ಒಂದು ಹಂತದವರೆಗೆ ವಾಸುದೇವ ಸಾಮಗರು, ಪೊಳಲಿ ಬಾಲಕೃಷ್ಣ ರಾಯರಂಥವರು ಈ ಕೆಲಸವನ್ನು ಮಾಡಿದ್ದಾರೆ.
ಪೊಳಲಿ ಬಾಲಕೃಷ್ಣ ರಾಯರು ತಂಡ ಕಟ್ಟಿಕೊಂಡು ಮೊಟ್ಟ ಮೊದಲ ಬಾರಿಗೆ ಬೇರೆ ಬೇರೆ ಕಡೆಗಳಲ್ಲಿ ಹೋಗಿ ಪ್ರದರ್ಶನವನ್ನು ಕೊಟ್ಟಿದ್ದಾರೆ.
ಇಂತಹ ಸಾಂಸ್ಥಿಕ ಪ್ರಯತ್ನದ ಕೊರತೆಯೇ ಸಮಸ್ತ ಕನ್ನಡಿಗರನ್ನು ತಲುಪದೇ ಇರಲು ಮುಖ್ಯ ಕಾರಣ.
ಕಟೀಲು ಸಿತ್ಲ: ಯಕ್ಷಗಾನ ತಾಳಮದ್ದಳೆಗೆ ನಿರ್ದೇಶಕನೊಬ್ಬ ಬೇಕೇ?
ವಾಸುದೇವ ರಂಗಾ ಭಟ್ಟ: ನಿರ್ದೇಶಕ ಸ್ವರೂಪ ಏನು? ವ್ಯಾಪ್ತಿ ಏನು? ಎನ್ನುವುದನ್ನು ಮತ್ತೆ ಬೇರೆಯಾಗಿಯೇ ಚರ್ಚಿಸಬೇಕಾಗುತ್ತದೆ. ಆದರೆ ನಿರ್ದೇಶನ ಬೇಕೇ ಬೇಕು. ಅನಿರ್ದೇಶಿತವಾದದ್ದರಿಂದಲೇ ಅತಿರೇಕಗಳೆಲ್ಲ ಕಾಣಿಸಿಕೊಂಡಿರುವುದು. ಆದುದರಿಂದ ಓರ್ವ ನಿರ್ದೇಶಕ ಬೇಕು. ನಿರ್ದೇಶನ ಸ್ವರೂಪ ಹೇಗಿರಬೇಕು ಎಂದು ಆಲೋಚಿಸುವಾಗ ನನಗನ್ನಿಸುವಂತೆ ನಿರ್ದೇಶನ ರಂಗದಲ್ಲಿರಬೇಕಾದದ್ದಲ್ಲ. ಅಲ್ಲಿ ಸಣ್ಣಪುಟ್ಟ ಸೂಚನೆಗಳು, ಪರಸ್ಪರ ಸಂವಹನೆಗಳು ಮಾತ್ರವೇ ಸಾಕು. ನಿರ್ದೇಶನ ನಿಜವಾಗಿ ಬೇಕಾದ್ದು ಚೌಕಿಯಲ್ಲಿ. ಇವತ್ತಿನ ಕಥೆ ಹೀಗೆ ಹೋಗಬೇಕು. ಇಂತಿಂಥ ವಿಭಾಗಗಳಿಗೆ ಇಷ್ಟಿಷ್ಟು ಸಮಯ, ಇಂಥಿಂಥ ಸನ್ನಿವೇಶಗಳು ಪ್ರಧಾನ, ಇಂಥಿಂಥ ಸನ್ನಿವೇಶಗಳು ತ್ವರಿತದಲ್ಲಿ ಮುಗಿಯಬೇಕು. ಈ ಪ್ರಸಂಗದ ಆಶಯ ಇಂಥದ್ದು. ಆ ಆಶಯ ಹಾಗೆಯೇ ಹೊರಹೊಮ್ಮಬೇಕು, ಸೃಜನಶೀಲತೆಗೆ ಅವಕಾಶವನ್ನು ಕೊಟ್ಟು ಆ ಸೃಜನಶೀಲತೆಯನ್ನು ಒಂದು ಶಿಸ್ತಿಗೆ ಒಳಪಡಿಸಬೇಕು. ಇಂತಹ ನಿರ್ದೇಶನ ಬೇಕು. ಇಂಥಹ ನಿರ್ದೇಶನ ಮಾಡದೇ ಇದ್ದರೆ ಸೃಜನಶೀಲತೆಯ ಹೆಸರಿನಲ್ಲಿ ಸ್ವಚ್ಛಂದತೆ ಹೆಚ್ಚಾಗುತ್ತದೆ. ತಾನು ಮಾಡಿದ್ದೇ ಸರಿ ಎನ್ನುವ ಧೋರಣೆ ಪ್ರಬಲವಾಗುತ್ತಾ ಹೋಗುತ್ತದೆ. ಇನ್ನೊಂದು ಮುಖ್ಯ ಅಂಶವೆಂದರೆ ನಿರ್ದೇಶನವೇ ಆಗಲಿ, ವಿಮರ್ಶೆಯೇ ಆಗಲಿ ಪ್ರದರ್ಶನ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಸಾಗುವುದಕ್ಕೆ ಅನುವು ಮಾಡಿ ಕೊಡಬೇಕೇ ಹೊರತು ಆ ಕಲಾವಿದ ಕಲೆಯನ್ನು ಬಿಟ್ಟು ಹೋಗುವ ಹಾಗೆ ಆಗಬಾರದು.
ಬಹಳ ಹಿಂದೆ ತಾಳಮದ್ದಳೆಗಳಲ್ಲಿ ಒಬ್ಬರು ಅಧ್ಯಕ್ಷರು ಅಂತ ಇರುತ್ತಿದ್ದರು. ಸಮಾಜದ ಗಣ್ಯರನ್ನು ಆ ಸ್ಥಾನದಲ್ಲಿ ಕುಳ್ಳಿರಿಸುತ್ತಿದ್ದರು. ಅವರನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುವುದೆಂದರೆ ಕಲಾವಿದರುಗಳು ಸಾಮಾನ್ಯರ ಮಾತನ್ನು ಕೇಳುವುದಿಲ್ಲ. ಗಣ್ಯ ವ್ಯಕ್ತಿಗಳ ಮಾತಿಗೆ ಮನ್ನಣೆ ಕೊಡಲೇ ಬೇಕಾಗುತ್ತದೆ. ಮೇಳಗಳಲ್ಲಿ ನಿರ್ದೇಶಕನ ಸ್ಥಾನವನ್ನು ನೀಡುವಾಗ ಪುರಾಣ ಜ್ಞಾನ, ಪ್ರಸಂಗ ಜ್ಞಾನ, ರಂಗ ಮಾಹಿತಿ ಎಲ್ಲವನ್ನೂ ಹೊಂದಿರುವವನನ್ನು ಆರಿಸುವುದು ಸೂಕ್ತ. ಕಲಾವಿದರಲ್ಲಿಯೇ ಒಬ್ಬನನ್ನು ಆರಿಸಬಹುದಾದರೂ ಕೂಡ ಮತ್ತೆ ಅಹಮಿಕೆಯ ಘರ್ಷಣೆಯ ಸಂಭವವಿದೆ.
ಕಟೀಲು ಸಿತ್ಲ: ಯಕ್ಷಗಾನ ಕನ್ನಡ ಭಾಷೆಯಲ್ಲಿಯೇ ಆಗಬೇಕು ಯಾಕೆ? ಅನ್ಯ ಭಾಷೆಗಳಲ್ಲಾದರೆ ಎದುರಾಗುವ ತೊಡಕುಗಳೇನು?
ವಾಸುದೇವ ರಂಗಾ ಭಟ್ಟ: ಹಿಂದಿಯವರು ಹಿಂದಿಯಲ್ಲಿ, ತಮಿಳರು ತಮಿಳಿನಲ್ಲಿ ಹೀಗೆ ಪುರಾಣಗಳನ್ನು ನಾವು ನಮ್ಮ ಭಾಷೆಯಲ್ಲಿಯೇ ಓದಿ ಮತ್ತು ಕೇಳಿ ಅಭ್ಯಾಸ. ತೊಡಕಾಗುವುದು ಅಥವಾ ಅಷ್ಟು ಸಮಂಜಸವಲ್ಲ ಎಂದು ಕಾಣುವುದು ಕನ್ನಡದವನು ಹಿಂದಿಯಲ್ಲಿ ನೋಡಿದಾಗ, ತಮಿಳಿನವ ಹಿಂದಿಯಲ್ಲಿ ನೋಡಿದಾಗ. ಆಗ ಅದು ನಮ್ಮದಲ್ಲ ಎಂದು ನಮಗೆ ಕಾಣುವುದು ನಾವು ಓದಿ, ಕೇಳಿ ತಿಳಿದ ನಮ್ಮ ಭಾಷೆಯಲ್ಲಿರದ ಕಾರಣ. ನಮ್ಮದು ಎಂದು ಅನ್ನಿಸುವ ಹಾಗೆ ಬರುತ್ತದೆ ಎಂದಾದರೆ ಯಾವ ಭಾಷೆಯಾದರೂ ತೊಂದರೆಯೇನಿಲ್ಲ. ಉದಾಹರಣೆಗೆ ಹಿಂದಿಯ, ಇಂಗ್ಲಿಷ್ ಅಥವಾ ಇನ್ಯಾವುದೇ ಭಾಷೆಯಲ್ಲಿ ಯಕ್ಷಗಾನವನ್ನು ಇಲ್ಲಿ ಕರ್ನಾಟಕದಲ್ಲಿ ಪ್ರದರ್ಶಿಸುವುದರಲ್ಲಿ ಅರ್ಥವಿಲ್ಲ, ಅಭ್ಯಾಸಕ್ಕಾಗಿ ಅಥವಾ ಪ್ರಯೋಗ ಎಂಬ ನೆಲೆಯಲ್ಲಿ ಬೇಕಿದ್ದರೆ ಮಾಡಬಹುದು, ಹಿಂದಿಯವರಿಗೆ ಹಿಂದಿಯಲ್ಲಿ, ತಮಿಳರಿಗೆ ತಮಿಳಿನಲ್ಲಿ ಪ್ರದರ್ಶಿಸಿದರೆ ಅವರಿಗೆ ಅದು ಅವರದ್ದಾಗಿ ಕಾಣುತ್ತದೆ ಮತ್ತು ಸ್ವೀಕರಿಸುತ್ತಾರೆ.
ಪ್ರಶ್ಣೆ ಬರುವುದು ನಿಜವಾಗಿ ತುಳು ಭಾಷೆಯಲ್ಲಿನ ಪ್ರದರ್ಶನದ ಬಗ್ಗೆ ಮಾತ್ರ. ತುಳು ಮನೆಮಾತಾಗಿ ಇರುವವ್ರೂ ಕೂಡ ರಾಮಾಯಣ, ಮಹಾಭಾರತ ಆದಿಯಾಗಿ ಪುರಾಣಗಳನ್ನು ಕೇಳಿದ್ದು ಓದಿದ್ದು ಕನ್ನಡದಲ್ಲಿಯೇ. ಆದುದರಿಂದಲೇ ತುಳು ಮನೆಭಾಷೆಯಾಗಿದ್ದರೂ ಕೂಡ ಈ ಪುರಾಣಗಳನ್ನು ಕನ್ನಡದಲ್ಲಿ ಓದಿ ಕೇಳಿದ್ದರಿಂದ ಸ್ವಲ್ಪ ಆಭಾಸವಾಗಿ ಕಾಣಿಸುವುದು. ತುಳು ಮನೆಭಾಷೆಯಾಗಿರುವ ಕಾರಣ ಈ ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳು ತುಳುವಿಗೆ ಹೆಚ್ಚು ಒಗ್ಗುವುದರ ಕಾರಣವಾಗಿ ತುಳುವಿನಲ್ಲಿ ಬಂದಾಗ ಹೆಚ್ಚು ವಿಜೃಂಭಿಸಿ, ಪೌರಾಣಿಕ ಪ್ರಸಂಗಗಳು ಹೆಚ್ಚು ಪ್ರಚಾರವಾಗದೇ ಉಳಿಯಿತು.
ಕಟೀಲು ಸಿತ್ಲ: ತಾಳಮದ್ದಳೆಗೆ ಬಯಲಾಟದ ಪ್ರೇಕ್ಷಕರನ್ನು ಸೆಳೆಯುವ ಬಗೆ ಹೇಗೆ?
error: Content is protected !!
Share This