ಯಕ್ಷಗಾನ ಕ್ಷೇತ್ರದ ವರ್ಚಸ್ವೀ ವ್ಯಕ್ತಿತ್ವ – ಸತೀಶ್ ಶೆಟ್ಟಿ ಪಟ್ಲ ಎಂಬ ವಿದ್ಯಮಾನ

ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು  ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ ವ್ಯಕ್ತಿತ್ವಗಳು ತಾವಿರುವ ಕ್ಷೇತ್ರವನ್ನು ಆವರಿಸಿಬಿಡುವ ಪ್ರಭಾವವನ್ನು ಪಡೆದವರಾಗಿರುತ್ತಾರೆ. ಯಕ್ಷಗಾನ ಕ್ಷೇತ್ರದಲ್ಲಿ ದಿ. ಅಜ್ಜ ಬಲಿಪರು, ದಿ. ಶೇಣಿ ಗೋಪಾಲಕೃಷ್ಣ ಭಟ್, ದಿ. ಕಾಳಿಂಗ ನಾವಡ ಇತ್ಯಾದಿ. ಪ್ರಸ್ತುತ ಪಟ್ಮ ಸತೀಶ ಶೆಟ್ಟರನ್ನು ಕೂಡ ಈ ತೆರನಾದ “ಕಲಾವಿದನಾಗಿ” ಟ್ರೆಂಡ್ ಸೆಟ್ಟಿಂಗ್ ವ್ಯಕ್ತಿತ್ವ ಎನ್ನಲು ಯಾವುದೇ ಅಡ್ಡಿ ಇಲ್ಲ. ಇದು ಸತೀಶ ಶೆಟ್ಟರ ಗಾಯನವನ್ನು ಮಾತ್ರ ಅನುಲಕ್ಷಿಸಿ ಹೇಳುವ ಮಾತು. ಅವರ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳಿಂದಾಗಿ ಅವರಲ್ಲೀಗಾಗಲೇ ಇದ್ದ ಪ್ರಭೆಗೆ ಮತ್ತಷ್ಟೂ ಮೆರುಗು ಕೊಟ್ಟಿದೆ.

ಅವರ ಶರೀರ ತ್ರಿಸ್ಥಾಯಿಯಲ್ಲಿ ಸುಗಮವಾಗಿ ಸಂಚರಿಸಬಲ್ಲಂತಹಾ, ಅದಾಗ್ಯೂ, ಮಂದ್ರ ಮತ್ತು ಮಧ್ಯಮ ಶ್ರುತಿ ಸ್ಥಾಯಿಯಲ್ಲಿ ಬಲಿಷ್ಟವಾದ ಸ್ವರ ಸಂಚಾರವುಳ್ಳ ಸ್ವರ-ಪ್ರತಿಭೆ (Voice beam) ಯುಳ್ಳ ; ತಾರ ಸ್ಥಾಯಿಯಲ್ಲಿ ಮೊನಚಾಗಿ ಸಾಗುವ ಸ್ವರ ಪ್ರಕೃತಿ ಪಟ್ಲರದ್ದು.

ಸತೀಶ ಶೆಟ್ಟರ ಧ್ವನಿ ಸ್ವರ ವಿಂಗಡಣೆಯ (Voice classification) ರೀತ್ಯಾ ಗಂಡು ಸ್ವರಗಳಲ್ಲಿನ ಟೆನರ್ (tenor) ಧ್ವನಿ. ಅಂದರೆ ಈ ಧ್ವನಿಯ ಸಹಜ ಹರಿವಿನ ಪರಿಧಿ ಕಪ್ಪು ಎರಡು ಮತ್ತು ಬಿಳಿ ಮೂರರ ಸ್ಥಾಯಿಯದ್ದು. ಆದರೆ ಮುಂದೆ ಬಿಳಿ ನಾಲ್ಕು ಮತ್ತು ಕಪ್ಪು ಮೂರರವರೆಗೂ ಸಾಗಬಲ್ಲದ್ದು. ಸತತ ಅಭ್ಯಾಸ ಮತ್ತು ಹಾಡುವಿಕೆಯಿಂದ ಧ್ವನಿ ಶಕ್ತಿ (tessitura) ಯನ್ನು ಬಿಳಿ ನಾಲ್ಕು ಕಪ್ಪು ಮೂರರ ಪರಿಧಿಗೆ ತಂದಿರಿಸಿದ್ದಾರೆ ಪಟ್ಲರು. ಇಲ್ಲಿ ಸಹೃದಯಿ ಪಟ್ಲರು ಅತ್ಯಂತ ಜತನದಿಂದ ತಮ್ಮ ಸ್ವರವನ್ನು ನಿಭಾಯಿಸಬೇಕೆಂಬುದು ನನ್ನ ಕಳಕಳಿ. ಕೆಲವೊಮ್ಮೆ Countertenor ಅಥವಾ ಅತಿತಾರದ ಕಡೆಗೆ ಮನವು ತುಡಿದರೂ ದೂರದೃಷ್ಟಿಯಿಂದ ಅವಲೋಕಿಸಿ ಮನಸ್ಸನ್ನು ನಿಗ್ರಹಿಸಿ ಶಾರೀರವನ್ನು ತೊಡಗಿಸಿಕೊಳ್ಳುತ್ತಾರೆಂಬುದು ನನ್ನ ಅಪೇಕ್ಷೆ. ಪಟ್ಲರ ಧ್ವನಿಯ ಭಾವ ಸಮೃದ್ಧಿ ಮಡುಗಟ್ಟಿರುವುದು ತೊಡಗಿಸಿಕೊಂಡ ಆಧಾರ ಶ್ರುತಿಯ ಮಧ್ಯಮ ಸ್ಥಾಯಿಯಲ್ಲಿ ಮತ್ತು ಮಂದ್ರ – ಅತಿ ಮಂದ್ರದಲ್ಲಿ. ಇಡಿಯಾಗಿ ಆವರಿಸಿಬಿಡುವ ಭಾವಪೂರ್ಣ ಗುರುತ್ವ ಶಕ್ತಿ ಅವರ ಧ್ವನಿತರಂಗಗಳಲ್ಲಿದೆ. ಪಟ್ಲರ ಧ್ವನಿ ವ್ಯಾಪ್ತಿಯಲ್ಲಿ ಸ್ವರ ವ್ಯೂಹಗಳು ಮಟ್ಟಸವಾಗಿ (flat) ಸಮತಲದಂತೆ ಸಾಗುತ್ತಿದ್ದವು. ಮುಂದೆ ಧ್ವನಿಯಲ್ಲಿನ ಮಾಗುವಿಕೆಗೆ ಕಾರಣವಾಗಿ ಕರ್ಣಾಟಕೀ ಮತ್ತು ಹಿಂದುಸ್ಥಾನಿ ಸಂಗೀತದ ಕಲಿಕೆ ಕೂಡ ಕಾರಣವಾಗಿದೆ. ಹಾಗಾಗಿ ಅವರ ಧ್ವನಿ ವ್ಯಾಪ್ತಿ (Voice range) ಯಲ್ಲಿ ಮತ್ತಷ್ಟೂ ಗುರುತ್ವವೂ, ಕಸುವೂ ಮತ್ತು ಕಂಪನವೂ ದೊರಕಿ ಭಾವ ಪ್ರಚೋದಕವಾಗಿ ಬೆಳೆದು ನಿಂತಿತು. ಭಾವಪೂರ್ಣವಾದ ಬೇಸ್ ಸ್ವರಕ್ಕೆ ಸಂವಾದಿಯಾಗಿ ಮದ್ದಳೆ ಹೇಗಪ್ಪಾ ನುಡಿಸುವುದು ಎಂಬುದನ್ನು ಇವರಲ್ಲಿ ತೋಡಿಕೊಂಡಿದ್ದೆ. ಅಂತಹಾದ್ದೇ ಬಲಿಷ್ಠ ಮಂದ್ರ ಸ್ವರ ಸಂಚಾರವನ್ನು ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯರೂ ಮತ್ತು ರಾಘವೇಂದ್ರ ಮಯ್ಯ ಇವರಲ್ಲಿಯೂ ಕಾಣಬಹುದು. ಹಿಂದೆ ದಿ. ಅಗರಿ ಶ್ರೀನಿವಾಸ ಭಾಗವತರು ತಮ್ಮ ಬಲಿಷ್ಠ ಬೇಸ್ ಸ್ವರವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು.

ಪಟ್ಲರಿಗೆ ಸರಳಿವರಸೆ ಜಂಟಿವರಸೆ ಮೊದಲಾದ ಸ್ವರಾಭ್ಯಾಸಗಳು ಗಾಯಕನ ಸ್ವರಕ್ಕೆ  ಬೇಕಾದ ಸಂಸ್ಕಾರವನ್ನು ಒದಗಿಸಿತು. ಸಂಗೀತದ ‘ಸಂಗತಿ’ ‘ಆಲಾಪನ’ ‘ಗಮಕ’ ಗಳನ್ನು ಯಕ್ಷಗಾನ ಭಾಗವತಿಕೆಗೆ ಬೇಕಾದ ಕಡೆ ಅವಶ್ಯವಿದ್ದಲ್ಲಿ ಬಳಸತೊಡಗಿದರು. ಯಕ್ಷಗಾನ ಭಾಗವತಿಕೆಗೆ ಸಂಗೀತದ ಗಮಕ-ಆಲಾಪನೆಗಳು ಪಟ್ಲರ ಭಾಗವತಿಕೆಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಮಾತ್ರವಲ್ಲ ಬಹುಸಂಖ್ಯೆಯಲ್ಲಿ ಯುವಜನರ ಚಿತ್ತಾಕರ್ಷಣೆಯನ್ನು ಮಾಡಿತು. ಅದಲ್ಲದೇ ಈ ಭಾಗವತಿಕೆಯ ಹೊಸ ವ್ಯಾಪ್ತಿ ಅಲ್ಲಲ್ಲಿ ಅಪಸ್ವರವನ್ನೂ ತಂದುಕೊಟ್ಟಿತು. ಆದರೆ, ಅವರ ಭಾಗವತಿಕೆಯ ನಡುವಿನ ಲಯ ಬದ್ಧವಾದ ಗಮಕಗಳು ರಂಗಕ್ಕೆ ಹೊಸ ಮೆರುಗನ್ನು ತಂದದ್ದು ಸುಳ್ಳಲ್ಲವಷ್ಟೇ ? ಇಡೀ ಪ್ರೇಕ್ಷಕರನ್ನು ಸನ್ಮೋಹಗೊಳಿಸಿದ್ದು ಸುಳ್ಳಲ್ಲವಷ್ಟೆ? ಇದು 2010 ರ ನಂತರ ಪಟ್ಲರ ಭಾಗವತಿಕೆಯ ಏರು ನಕ್ಷೆ.

ಪಟ್ಲರ ಗಾನದಲ್ಲಿನ ಗಮಕ (ಅಲಗು, ಆಲಾಪನೆ) ಕ್ಕೆ  ತಾಳಕ್ಕೆ ಕಚ್ಚಿ ಆಲಾಪನೆ ಸಾಗುವ ಶಿಸ್ತು ಇದೆ. ಸತತ ಅಭ್ಯಾಸದಿಂದ ಇದು ಸಿದ್ದಿಸಿದ್ದು. ತಾಳದ ಅಂಗ ಅಂಗಗಳಲ್ಲಿ ವಿರಾಮ ಪಡೆದು ನೆಗೆನೆಗೆದು ಮುಂದುವರಿಯುವ ತುಂಟತನವನ್ನೂ ಹೊಂದಿದೆ. ಗ್ರಹಬೇಧ ಮಾಡಿ ಆಲಾಪ ಮಾಡುವುದೂ ಇವರ ಕ್ರಮ. ತಾಳದ ‘ಸಮ್’ನಿಂದ ಅರ್ಧ ಮಾತ್ರಾವರ್ತವೋ ಒಂದು ಮಾತ್ರಾವರ್ತವೋ ಬಿಟ್ಟು ತೊಡಗುವ ಕ್ರಮವೂ ವಾದಕರಿಗೆ ತಾಳಾನುಸಂಧಾನತೆಯಲ್ಲಿ ಜಾಗರೂಕರಾಗಿರಬೇಕೆಂಬುದನ್ನ ಅಪೇಕ್ಷಿಸುವಂತಹಾ ಪ್ರಸ್ತುತಿ ಪಟ್ಲರದ್ದು.

ಯಕ್ಷಗಾನ ಛಂದಸ್ಸಿನ ಜ್ಞಾನವನ್ನು ಶಿಮಂತೂರು ನಾರಾಯಣ ಶೆಟ್ಟರಿಂದ ಪಡೆದಿರುವ ಇವರಿಗೆ ಪದದ ಸಾಹಿತ್ಯದ ಶಿಲ್ಪದ ಪರಿಚಯ ಚೆನ್ನಾಗಿದೆ. ತಿತ್ತಿತ್ತೈ ತಾಳದ ಪದಗಳಲ್ಲಿ ಪಟ್ಲರು ತೋರುವ ಸ್ತೋಪಜ್ಞತೆ ಅನನ್ಯವಾದುದು (ಗ್ರಹ ಬೇಧ ಮಾಡಿ ಹಾಡುವುದು: ಸಮ ಗ್ರಹ, ಅತೀತ ಗ್ರಹ ಮತ್ತು ಅನಾಗತ ಗ್ರಹ). ತಾಳದ ಮೊದಲ ಪೆಟ್ಟಿನಿಂದ ಪದ ತೊಡಗುವುದು – ಸಮಗ್ರಹ ಪದ್ಯ, ತಾಳ ಮೊದಲಾಗಿ ಮತ್ತೆ ಪದ ಹಾಗೆಯೇ ಪದ ಮೊದಲಾಗಿ ಮತ್ತೆ ತಾಳ ಹೀಗೆಲ್ಲಾ ಗ್ರಹ ಬೇಧ ಮಾಡಿ ಹಾಡುವ ರಂಜನೀಯವಾದ ತಾಳದಲ್ಲಿನ ಆಟವನ್ನು ಪಟ್ಲ ಸತೀಶ ಶೆಟ್ಟರು ತೋರುತ್ತಾರೆ.

ಮಾತ್ರವಲ್ಲ ತಿತ್ತಿತ್ತೈ ತಾಳದ ಪದ್ಯವನ್ನು ಅದರಲ್ಲಿರುವ ಮೂರು ಘಾತಗಳಾದ ‘ತಿ’ ‘ತ್ತಿ’ ‘ತ್ತೈ’ಮೂರರಿಂದಲೂ ಪ್ರತ್ಯೇಕವಾಗಿ ಆರಂಭವಾಗುವ ಗಾನ ಚಮತ್ಕಾರವನ್ನು ತೋರುತ್ತಾರೆ. ಇದು ಬಲಿಪ ನಾರಾಯಣ ಭಾಗವತರ ಗರಡಿಯಲ್ಲಿ ಪಳಗಿದುದರ ಪರಿಣಾಮ. ಗ್ರಹಬೇಧ ಮಾಡಿ ಹಾಡಲು ತೊಡಗುವ ಮುನ್ನ ತಾಳದಲ್ಲಿ ಬಲವಾಗಿ ಹಾಕುವ ಘಾತ ಬಲಿಪರಲ್ಲೂ ಮತ್ತು ಪಟ್ಲ ಸತೀಶ ಶೆಟ್ಟರಲ್ಲೂ ಒಂದೇ ರೀತಿಯಾಗಿದೆ. ಇಂತಹಾ ಚಮತ್ಕೃತಿಯನ್ನು ಪುತ್ತಿಗೆ ರಘುರಾಮ ಹೊಳ್ಳರಲ್ಲೂ, ಪುರುಷೋತ್ತಮ ಪೂಂಜರಲ್ಲೂ ಕಾಣಬಹುದು. ತಿತ್ತಿತ್ತೈ ಪದಗಳಿಗೆ ಬಾಯಿತಾಳ ಹಾಕಿ ಕುಣಿಸುವುದು ಸಾಮಾನ್ಯ. “ ತೊಂತನ ದಿಂದತ್ತೈ” “ ಧೀಂತನ ದಿಂದತ್ತೈ” “ತೊಂತನ ತೊಂತನ ತೋಂತನ ದಿಂದತ್ತೆತ್ತೈ” ಈ ಬಾಯಿತಾಳ ತಾಳದ ಎರಡನೆಯ ಪೆಟ್ಟಿನಿಂದ ಆರಂಭವಾಗುವುದಾದರೆ, ಪಟ್ಲ ಸತೀಶ ಶೆಟ್ಟರು ತಾಳದ ಆರಂಭದಿಂದ ಶುರುವಾಗುವ ಬಾಯಿತಾಳವನ್ನೇ ಪ್ರಧಾನವಾಗಿ ಬಳಸಿ ಕುಣಿಸುತ್ತಾರೆ. ಅದೆಂದರೆ- “ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟದಿಂದತ್ತೈ”. ಇಲ್ಲಿ ನಮಗೆ ಮುಖ್ಯವಾಗುವುದು ತಿತ್ತಿತ್ತೈ ತಾಳದ ಮೂಲ ರೂಪವಾದ “ತಕದಿಮಿತಕಿಟ” ಅಂದರೆ ತಿಶ್ರ ತ್ರಿಪುಟದ (ತಕಿಟ ತಕದಿಮಿ) ವಿಲೋಮ ಗತಿಯನ್ನು ಅನುಸರಿಸಿ ಬಾಯಿತಾಳ ಹಾಕುವುದು. ತಿತ್ತಿತ್ತೈ ತಾಳದ ಮೂಲ ಸ್ವರೂಪವೇ ತಕದಿಮಿತಕಿಟವಾದ ವಕಾರಣ  ಅದನ್ನೇ ನೆಚ್ಚಿ ಬಾಯಿತಾಳ ಹಾಕುವುದು. ಛಾಂದಸರಾದ ಗಣೇಶ ಕೊಲೆಕಾಡಿಯವರು ತಾವು ಕಲಿಸುವ ಪಾಠದಲ್ಲೂ ತಿತ್ತಿತ್ತೈ ತಾಳದ ಬಾಯಿತಾಳ – ಅಂದರೆ ಪದದ ನಡುವೆ ಭಾಗವತ ಬಾಯಿತಾಳ ಹಾಕುತ್ತಾನಲ್ಲಾ ಅದು- “ದಿಂದಿಂತಕಿಟ” ಮತ್ತು “ತಕದಿಮಿತಕಿಟ” ಎಂದೇ ಇದೆ. ವಿಳಂಬ ಲಯದಲ್ಲಿ ಪಟ್ಲರು ಹಾಡುವ ಗಾಯನವೂ ಸೊಗಸೇ. ಜಾಗಟೆಗೆ ಬೀಳುವ ಘಾತ ಭಾರವಾಗಿ ಲಯದ ಅವಧಿಯಲ್ಲಿ ಸುಸ್ಪಷ್ಟವಾಗಿ ವಾದಕರಿಗೆ ಮನೋಧರ್ಮ ಹಚ್ಚುವಂತಹಾ ಅನುಸರಣೀಯಾದ ತಾಳ ಹಾಕುವ ಕ್ರಮ. ತಾಳದ ಎಲ್ಲಾ ಘಾತಗಳನ್ನು ಹಾಕುತ್ತಾರೆ. ಇದು ಬಹಳ ಮುಖ್ಯ. ಕುಣಿಯುವಾಗ ತಾಳದ ಎಲ್ಲಾ ಘಾತಗಳನ್ನು ಹಾಕದಿದ್ದರೆ ಮದ್ದಲೆ-ಚೆಂಡೆ ವಾದಕರಿಗೆ ತುಂಬಾ ತೊಡಕಾಗುತ್ತದೆ. ಹಾಕಿದರೆ ಮನೋಧರ್ಮ ಹುಚ್ಚೆದ್ದು ಕುಣಿದು ಬಿಡುತ್ತದೆ.

ಕಟೀಲು ಮೇಳದಲ್ಲಿ ಬಲಿಪ ನಾರಾಯಣ ಭಾಗವತರ ಜತೆಗೆ ಶಿಷ್ಯವೃತ್ತಿಯನ್ನು ಮಾಡಿ ಪ್ರಸಂಗ-ಪದ್ಯಗಳ ಒಳಗನ್ನು ತನ್ನೊಳಗುಮಾಡಿ ಮದ್ದಲೆಗಾರರಾದ ಪೆರುವಾಯಿ ನಾರಾಯಣ ಭಟ್ಟರ ಸಲಹೆ ಸೂಚನೆಗಳನ್ನು ಪಡೆಯುತ್ತಾ ಬೆಳೆದ ಸತೀಶ ಶೆಟ್ಟರು ಇಂದು “ಪಟ್ಲ ಭಾಗವತ” ರಾಗಿದ್ದಾರೆ. ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಹಿಮ್ಮೇಳ ಕಲಿತು, ಬಳ್ಳಂಪದವು ಯೋಗೀಶ ಶರ್ಮರ ಬಳಿ ಶಾಸ್ತ್ರೀಯ ಸಂಗೀತ; ರೋಶನ್ ಮಾರ್ಟಿಸ್ ಅವರ ಬಳಿ ಹಿಂದುಸ್ಥಾನಿ ಸಂಗೀತದ ಅಭ್ಯಾಸ ಮಾಡಿರುವ ಪಟ್ಲರು ಸಂಗೀತದ ಸತತ ಅಭ್ಯಾಸಿ. ರಾಗಗಳ ಕುರಿತು ಅತೀವ ಆಸಕ್ತಿ. ಯಕ್ಷಗಾನಕ್ಕೆ ಒಗ್ಗುವ ರಾಗವನ್ನು ಅದರ ಸ್ವರ ಸಹಿತ ಹಾರ್ಮೋನಿಯಂ ಜತೆ ಅಭ್ಯಾಸ ಮಾಡಿಯೇ ರಂಗಕ್ಕೆ ತರುವುದಲ್ಲದೆ ಕೇವಲ ಅನುಕರಣೆ ಮಾಡಿ ಅಲ್ಲ. ಇದು ಪಟ್ಲರ ಅನನ್ಯತೆ, ಅವರ ಜನಪ್ರಿಯ ಆಲಾಪನೆಗಳನ್ನು ನೋಡುವಾಗ ಅವರ ಅಭ್ಯಾಸ ಕ್ರಮ ಪಟ್ಟ ಸಾಧನೆ ಗಮನಿಸಬೇಕು. ಅನುಕರಣೆ ಮಾಡುವವರು ಅಥವಾ ಅವರಂತೆ ಹಾಡ ಬಯಸುವವರು ಇವನ್ನೆಲ್ಲಾ ನೋಡಬೇಕು.

– ಕೃಷ್ಣಪ್ರಕಾಶ ಉಳಿತ್ತಾಯ

error: Content is protected !!
Share This
%d bloggers like this: