ಯಕ್ಷಗಾನ ಸ್ಥಿತಿಗತಿ – ಡಾ.  ಎಂ ಪ್ರಭಾಕರ ಜೋಷಿ

ಇತ್ತೀಚೆಗೆ ಹಿರಿಯ ವಿದ್ವಾಂಸ,  ಯಕ್ಷ ಚಿಂತಕ ಶ್ರೀ  ಡಾ.  ಎಂ ಪ್ರಭಾಕರ ಜೋಷಿಯವರ ಮನೆಗೆ ಹೋಗಿದ್ದಾಗ ಎರಡು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ವೃತ್ತಿಯಲ್ಲಿ ಪ್ರಾಧ್ಯಾಪಕರೂ ಸಹ ಆಗಿದ್ದ ಜೋಷಿಯವರಿಗೆ ಓದುವಿಕೆಯ ಮಹತ್ವ ಬಹಳಷ್ಟು ತಿಳಿದಿದೆ. ಹಾಗಾಗಿ ಅದೇ ಬೆಳೆಯನ್ನು ನನ್ನಲ್ಲೂ ಗುರುತಿಸಿದ್ದು ನನಗೆ ಅಚ್ಚರಿಯನ್ನು ತಂದಿತು. ಸದ್ಯ ಪುಸ್ತಕ ಓದುವುದೆಂದರೆ ತುಸು ಶ್ರಮದಾಯಕ ಕೆಲಸ. ಮತ್ತದಕ್ಕೆ ಅತ್ಯಂತ ಕಟಿಬದ್ದತೆ ಅನಿವಾರ್ಯ. ಯಾಕೆಂದರೆ ದಿನದ ಇಪ್ಪತ್ನಾಲ್ಕು ಘಂಟೆಯಲ್ಲಿ ಕೇವಲ ದಿನ ಪತ್ರಿಕೆಯನ್ನು ಓದುವುದಕ್ಕೇ ಸಮಯ ಸಾಲುವುದಿಲ್ಲ.  ಇನ್ನು ಈ  ಪುಸ್ತಕ?

ಆದರೂ ಕೆಲವು ಸಮಯದ ಮೊದಲು ಭಗವದ್ಗೀತೆ ಓದುವುದಕ್ಕೇ ಒಂದಷ್ಟು ಸಮಯ ಮೀಸಲಿರಿಸಿದ್ದೆ. ಎಲ್ಲರೂ ಭಗವದ್ಗೀತೆ ಎಂದು ಹೇಳುತ್ತಾ ಪವಿತ್ರ ಗ್ರಂಥವೆಂಬಂತೆ ಕಾಣುತ್ತಾರೋ ಆದರೆ ಅದನ್ನು ಪೂರ್ಣವಾಗಿ ಓದಿದವರೆಷ್ಟು ಮಂದಿ? ಅದನ್ನು ಗಮನಿಸಿದರೆ ಆಘಾತವಾಗಿಬಿಡುತ್ತದೆ. ಭಗವದ್ಗೀತೆ  ಕೇವಲ ಪವಿತ್ರ ಸ್ಥಾನಕ್ಕೆ ಮಾತ್ರ ಸೀಮಿತವಾಗುತ್ತದೆ. ಪವಿತ್ರವೆಂದರೆ ಗರ್ಭಗುಡಿಯ ದೇವರಂತೆ ಅದೂ ದೂರದಿಂದ ನೋಡಿ ನಮಸ್ಕರಿಸುವುದಕ್ಕಷ್ಟೇ ಸೀಮಿತ.

ಬಾಲ್ಯದಲ್ಲಿ ನಾನು ಒಂದು ರೀತಿಯ ಪುಸ್ತಕದ ಹುಳುವೇ ಆಗಿದ್ದೆ. ಎನಾದರೂ ಒಂದು ಓದುವುದಕ್ಕೆ ಇರಲೇ ಬೇಕಿತ್ತು. ಅಂಗಡಿಯಿಂದ ಸಾಮಾನು ಕಟ್ಟಿತರುವ ಕಾಗದದ ಚೂರೂ ಸುಮ್ಮನೇ ಕೈಯಿಂದ ಜಾರುತ್ತಿರಲಿಲ್ಲ.  ಆದರೆ ಜೀವನ ನಿರ್ವಹಣೆಗಾಗಿ ಅರ್ಥದ ಹಿಂದೆ ಧಾವಿಸುವಾಗ ಜೀವನ ಅರ್ಥವಿಲ್ಲದಂತೆ ಭಾಸವಾಗಿತ್ತು. ಓದುವಿಕೆ  ವಾಚನ ಎಷ್ಟು ಅನಿವಾರ್ಯವೋ ಅಷ್ಟಕ್ಕೆ ಮಾತ್ರ ಸೀಮಿತವಾಗಿ ವರ್ಷಗಳು ಕಳೆದಿತ್ತು. ಜೋಷಿಯವರ ದ್ವಾರ ಮತ್ತೊಮ್ಮೆ ಚಿಗುರಿತು. ಹಾಗೆ ಸಿಕ್ಕಿದ ಎರಡು ಪುಸ್ತಕಗಳಲ್ಲಿ ಒಂದು ’ಯಕ್ಷಗಾನ ಸ್ಥಿತಿಗತಿ’  ಎಂಬುದು.  ಬಹಳ ಪ್ರಯತ್ನದಿಂದ ಆಸಕ್ತಿಯಿಂದ ಓದುವುದಕ್ಕೆ ತೊಡಗಿದೆ. ಇದಕ್ಕೆ ಒಂದು ಕಾರಣ ಆ ಪುಸ್ತಕ. ಅದು ಒಂದಷ್ಟು ಆಸಕ್ತಿಯನ್ನು ಮೂಡಿಸುತ್ತಾ ಸಾಗಿತ್ತು. ಓದುವುದು ಎಂದರೆ ಅದು ಕೇವಲ ಓದು ಅಲ್ಲ. ಅದರೊಂದಿಗೆ ನಮಗೆ ಅರಿವಿಲ್ಲದೇ ಅಧ್ಯಯನವೂ ಜತೆಗಿರುತ್ತದೆ.

ಅನುಭವ ಮತ್ತು ಅಧ್ಯಯನ ಬದುಕನ್ನು ಹಣ್ಣಾಗಿಸುತ್ತದೆ ಅಂದರೆ ಮಾಗಿಸುತ್ತದೆ. ಹಣ್ಣು ಹೆಚ್ಚಾದರೆ ಮರ ಬಾಗುತ್ತದೆ. ಆದರೆ ಅಧ್ಯಯನ ಹೆಚ್ಚಾದಂತೆ ಮನುಷ್ಯನ ತಲೆ ನೆಟ್ಟಗಾಗುತ್ತದೆ. ಆತ ತಲೆಬಾಗಿಸುವ ಪ್ರಮೇಯ ಒದಗುವುದಿಲ್ಲ. ಆತನ ವಿದ್ಯೆಗೆ ಜಗತ್ತೇ ಬಾಗುತ್ತದೆ. ಅಧ್ಯಯನದ ಮೂಲರೂಪವೇ ಬರಹ. ಅದು ಶಾಸನವಾಗಿ ಲೇಖನವಾಗಿ ಬದುಕನ್ನು ತೋರಿಸುತ್ತದೆ. ಓದುವ ಮನುಷ್ಯ ತಿಳಿಯುತ್ತಾ ಹೋಗುತ್ತಾನೆ. ಅದುವೇ ಜ್ಞಾನ. ಅ ಜ್ಞಾನದ ಹೆಜ್ಜೆಗಳೇ ಅಕ್ಷರಗಳು.

ವಿದ್ಯೆ ಮತ್ತು ಅನುಭವ ಅವುಗಳು ಹುಟ್ಟುವುದು ಮಾತ್ರ. ಅವುಗಳಿಗೆ ನಾಶವಿಲ್ಲ. ಅದು ಇಲ್ಲ ಎಂದಾದರೆ ಅದರ ಅರ್ಥ ನಾವು ಅದರ ಬಳಿಗೆ ಹೋಗಿಲ್ಲ ಎಂದೇ ಆಗುತ್ತದೆ. ಹಾಗಾಗಿಯೇ ವಿದ್ಯೆ ಮತ್ತು ಅಕ್ಷರ ಒಂದಾಗಿಯೇ ಭಾಸವಾಗುತ್ತದೆ. ಕ್ಷರ ಅಂದರೆ ಚ್ಯುತಿ, ಅಕ್ಷರವೆಂದರೆ ಬೇರೆ ಹೇಳಬೇಕಾಗಿಲ್ಲ. ಚ್ಯುತಿ ಇಲ್ಲದೇ ಇರುವಂತಹುದು, ಪೂರ್ಣಾರ್ಥದಲ್ಲಿ ನಾಶವಾಗದೇ ಶಾಶ್ವತವಾಗಿರುವಂತಹುದು. ಈ ಅಕ್ಷರಕ್ಕೆ ಮನುಷ್ಯ ಮೌಲ್ಯವನ್ನು ಕಟ್ಟುತ್ತಾನೆ. ಅದು ಅಪಮೌಲ್ಯವಾಗದೇ ಇರುವುದಕ್ಕೆ ಬಯಸುತ್ತಾನೆ. ಈ ಅಕ್ಷರರೂಪದಲ್ಲಿ ಯಾವುದು ಕಾಣಿಸುತ್ತಿದೆಯೋ ಅದು ಶಾಶ್ವತ ಎಂಬ ಭಾವನೆ ಬಂದುಬಿಡುತ್ತದೆ. ಹಾಗಾಗಿ ಅಕ್ಷರವೆಂಬುದು ದಾಖಲೆಯ ಮಾಧ್ಯಮವಾಗಿ ಆ ಅಕ್ಷರ ಸಮೂಹವೇ ಪುಸ್ತಕವಾಗಿ ಗ್ರಂಥವಾಗಿ ಸಾಕ್ಷ್ಯವಾಗಿಬಿಡುತ್ತದೆ. ವಿದ್ಯೆಯ ಮೂಲ ಸ್ವರೂಪವೇ ಅಕ್ಷರ. ವಿದ್ಯೆ ಅಂದರೆ ಜ್ಞಾನದ ಪ್ರತೀಕ. ಅಕ್ಷರದ ವೀಕ್ಷಣೆಯಲ್ಲಿ ಜ್ಞಾನ ಅಡಗಿದೆ. ಅಕ್ಷರವನ್ನು ಅವಲೋಕಿಸುತ್ತಿದ್ದರೆ ಅದು ಓದುವಿಕೆ ಅಥವಾ ಅಧ್ಯಯನವಾಗಿ  ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನಕ್ಕೂ ಅಧ್ಯಯನಕ್ಕೂ ಇರುವ ಅವಿನಾಭಾವ ಸಂಭಂಧವಿದು. ಯಾವುದೇ ಜ್ಞಾನ ವಿದ್ಯೆ ಮೂಲ ರೂಪದಲ್ಲಿ ಅಕ್ಷರ ಸಮೂಹವೇ ಆಗಿರುತ್ತದೆ. ಹಾಗಾಗಿ ವಿದ್ಯೆ ಎಂಬುದು ಜ್ಞಾನ ಮಾತ್ರವಲ್ಲ ಅದು ಯಾರೂ ಅಪಹರಿಸದ ಶಾಶ್ವತ ಸಂಪತ್ತಾಗಿ  ಅಕ್ಷರ ಎಂಬುದು ಅರ್ಥದಿಂದಲೂ ಅನ್ವರ್ಥವಾಗಿಬಿಡುತ್ತದೆ. ಅಧ್ಯಯನ, ಓದುವಿಕೆಗೆ  ಅಕ್ಷರವಾದ ಪುಸ್ತಕವೂ ಅತ್ಯವಶ್ಯ. ಜ್ಞಾನದ ಮೂಲ ಮಾಧ್ಯಮವೇ ಪುಸ್ತಕ. ಯಾರು ಪುಸ್ತಕದ ಜತೆ ಮಸ್ತಕವನ್ನು ತೊಡಗಿಸುರುತ್ತಾರೋ ಅವರು ಜ್ಞಾನಿಗಳೇ ಆಗಿರುತ್ತಾರೆ. ಓದುವಿಕೆಗೂ ಓದುಗನಿಗೂ ಇರುವ ಮಹತ್ವವದು. ವಿದ್ಯೆ ಎಂದರೆ ಓದು.  ಮತ್ತೊಬ್ಬರ ಮನಸ್ಸನ್ನೂ ವ್ಯಕ್ತಿತ್ವವನ್ನೂ ಅರಿಯಬೇಕಾದರೆ,  ಅವರನ್ನು ಓದಲೇಬೇಕು. ಈ ಕಂಪ್ಯೂಟರ್ ಯುಗದಲ್ಲಿ ಎಲ್ಲವನ್ನೂ ನಾವು  ತತ್ರಾಂಶ ಅಂದರೆ ಸಾಪ್ಟ್ ರೂಪದಲ್ಲಿ ಕಾಣುವುದಕ್ಕೆ ಬಯಸುತ್ತೇವೆ. ಹಾಗಿದ್ದರೂ ಪುಸ್ತಕಕ್ಕೆ ಅದರದ್ದೇ ಆದ ಮಹತ್ವವಿದೆ.  ಈ ಪುಸ್ತಕವನ್ನು ಓದುವ ಮತ್ತು ಅಕ್ಷರೋಪಾಸನೆಯನ್ನು ಮಾಡುವ ಹವ್ಯಾಸ ಜ್ಞಾನ ವೃದ್ಧಿಗೆ ಕಾರಣವಾಗುತ್ತದೆ. ಪೀಠಿಕೆ ತುಸು ಉದ್ದ ಆದಂತೆ ಕಾಣಬಹುದು. ಇರಲಿ.

ಯಕ್ಷಗಾನ ಸ್ಥಿತಿಗತಿಯನ್ನು ಅವಲೋಕಿಸಿ  ಯಾರೂ ಸಹ ಹೇಳಬಲ್ಲರು. ಯಾಕೆಂದರೆ ಯಕ್ಷಗಾನ ತೀರ ಸರಳ ಮನುಷ್ಯನೂ ಅನುಭವಿಸಬಹುದಾದಂತಹ ಕಲೆ. ಏನೂ ತಿಳಿಯದವನಿಗೂ ಅಲ್ಲಿ ನೋಡುವಂತಹುದು ಇರುತ್ತದೆ. ಅದರೆ  ಯಕ್ಷಗಾನವನ್ನು ಅಮೂಲಾಗ್ರವಾಗಿ ತಿಳಿದ ಜೋಷಿಯವರು ಹೇಳಿದಾಗ ಅದರಲ್ಲಿ ಕುತೂಹಲ ಸಹಜ. ಯಕ್ಷಗಾನ ಅರ್ಥಗಾರಿಕೆಯಂತೆ ಮತ್ತವರ ಪ್ರವಚನದಂತೆ ಅದಕ್ಕೊಂದು ಜೋಷಿ ಸ್ಪರ್ಶ ಎಂಬುದು ಇದ್ದೇ ಇರುತ್ತದೆ.

“ಯಕ್ಷಗಾನ ಸ್ಥಿತಿಗತಿ” ಎಂಬ ಪುಸ್ತಕದಲ್ಲಿ ಮುಖ್ಯವಾಗಿ ಇಪ್ಪತ್ತೆರಡು  ಭಾಗಗಳ ಅಥವಾ ಅಧ್ಯಾಯಗಳ ಮೂಲಕ ಅವಲೋಕಿಸಲ್ಪಟ್ಟಿದೆ. ಇಲ್ಲಿ ಭೂತ ವರ್ತಮಾನ ನಂತರ ಭವಿಷ್ಯ ಇದರ ಹದವಾದ ವಿಶ್ಲೇಷಣೆ ಇದೆ. ವಾಡಿಕೆಯಲ್ಲಿ ಜೋಷಿ ಎಂದರೆ ಜೋಯಿಸರು ಎಂದೂ ಸಹ ಹೇಳುವಾಗ ಜೋಷಿಯವರ ಈ ಪುಸ್ತಕ ಮತ್ತು ಚಿಂತನೆ ಈ  ಭೂತ ಭವಿಷ್ಯತ್ ಗಳ ನಡುವಿನ ಸಂಚಾರ  ಅರ್ಥಪೂರ್ಣ ಎನಿಸುತ್ತದೆ. ಯಕ್ಷಗಾನದ ವರ್ತಮಾನದ ಸ್ಥಿತಿಗೆ ಈ ಚಿಂತನೆ ಎಷ್ಟು ಅನಿವಾರ್ಯ ಎಂಬುದು ಈ ವಿಭಾಗಗಳನ್ನು ಗಮನಿಸಿದರೆ ಅರಿವಿಗೆ ಬರುತ್ತದೆ. ಇದಕ್ಕೆ ಮಹತ್ವವಿರುವುದು, ಯಕ್ಷಗಾನವೆಂದರೆ ಪಂಡಿತರಿಂದ ಪಾಮರನ ವರೆಗೆ ಹೇಗೆ ಅದಕ್ಕೆ ಪ್ರೇಕ್ಷಕನಿದ್ದಾನೋ ಅದೇ ರೀತಿ ಯಕ್ಷಗಾನದ ಬಗ್ಗೆ ಹೇಳಿ ಅದನ್ನು ವ್ಯಾಖ್ಯಾನಿಸುವುದರಲ್ಲೂ ಆ ವರ್ಗವಿದೆ. ಹಾಗಾಗಿ ಈ ಪುಸ್ತಕ ಮತ್ತದರ ವಿಚಾರಗಳು ಮಹತ್ವವೆನಿಸುವುದು.

ಮೊದಲಿಗೆ ರಂಗಭೂಮಿಯ ವ್ಯಾಕರಣದ ಮೂಲಕ ಯಕ್ಷಗಾನ ಸೂಕ್ಷ್ಮ ಅವಲೋಕನವಿದೆ. ರಂಗಭಾಷೆಗೆ ಯಕ್ಷಗಾನ ಹೇಗೆ ಬೆಸೆದುಕೊಂಡಿದೆ ಎಂಬ ವಿವರಣೆಯಿಂದ ತೊಡಗಿ ಯಕ್ಷಗಾನದ ಪ್ರಾಥಮಿಕ ಪಾಠವನ್ನು ವಿವರಿಸಲಾಗುತ್ತದೆ. ಎಲ್ಲಾ ರಂಗಕಲೆಗಳಂತೆ ಯಕ್ಷಗಾನಕ್ಕೂ ಅದೇ ಸೌಂದರ್ಯ ವ್ಯಾಕರಣ ಎಲ್ಲವೂ ಇದೆ. ಹಲವು ರಂಗಕಲೆಗಳನ್ನು ಸೂಕ್ತವಾಗಿ ಉದಾಹರಿಸಿ ಬಹಳ ಅರ್ಥೈಸುವ ಹಾಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. “ಅವಸ್ಥಾನುಕರಣಂ” ಎಂಬುದಕ್ಕೆ ಯಕ್ಷಗಾನದಂತಹ ಕಲಾಪ್ರಕಾರಗಳು ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು, ಅವಸ್ಥಾನುಕರಣೆಯೇ ನಾಟ್ಯ ಹೀಗೆ ಅದನ್ನನುಸರಿಸಿ ಭರತನಾಟ್ಯ ಸೃಷ್ಟಿ ಈ ತತ್ವದ ಮೂಲಕ ಯಕ್ಷಗಾನದಂತಹ ಕಲಾಪ್ರಕಾರಗಳು ಭರತ ನಾಟ್ಯಕ್ಕಿಂತಲೂ ಮೊದಲು ಅಸ್ತಿತ್ವದಲ್ಲಿ ಇತ್ತು ಎಂಬುದರ ಪ್ರತಿಪಾದನೆ ಸುಂದರವಾಗಿದೆ.

ಈ ಲೇಖನ ಮಾಲೆಯ ಆರಂಭದಲ್ಲಿ ಯಕ್ಷಗಾನದ ಪ್ರಾಥಮಿಕ ಹಂತದಿಂದ ತೊಡಗಿ ಅದರ ಪ್ರತಿ ಅಂಗವನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಕೆಲವು ಕಡೆ  ವಿವರಿಸುತ್ತಾ ಅವುಗಳು ಬದಲಾದ ರೀತಿಯನ್ನೂ ಅವುಗಳ ಅಸಹಜತೆಯನ್ನು ವಿವರಿಸುತ್ತಾರೆ. ಅದು ಭಾಗವತಿಕೆ ಹಿಮ್ಮೇಳ ವೇಷ ಭೂಷಣ ಬಣ್ಣಗಾರಿಕೆ ಹೀಗೆ ಇವುಗಳು ಹೇಗಿತ್ತು ಮತ್ತೆ ಅದರಲ್ಲಿ ಬದಲಾವಣೆಗಳ ವಿಶ್ಲೇಷಣೆ ಸೊಗಸಾಗಿದೆ. ಕೆಲವು ಬದಲಾವಣೆಗಳು ಯಕ್ಷಗಾನಕ್ಕೆ ಹೇಗೆ ಅಸಹಜವಾಗಿವೆ ಮತ್ತು ಕೆಲವು ಬದಲಾವಣೆಗಳು ಸೂಕ್ತವೂ ಆಗಿದೆ ಇವುಗಳನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಅದಕ್ಕೆ ಕೆಲವು ಸೂಕ್ತ ಉದಾಹರಣೆಯನ್ನೂ ನೀಡಿದ್ದಾರೆ.

ಇಲ್ಲಿ ಶಬ್ದ ಶಬ್ದಗಳಲ್ಲೂ ಯಕ್ಷಗಾನದ ಬಗೆಗಿನ ಮೋಹ ವ್ಯಕ್ತವಾಗುತ್ತದೆ. ಅದರ ನಡುವೆ  ಬದಾಲಾವಣೆಯ ಭೀತಿಯೂ ಅಲ್ಲಲ್ಲಿ ಕಾಣಬಹುದು. ಉತ್ತರಭಾರತದ ಕೆಲವೆಡೆ ಇಲ್ಲಿನ ತಂಡಗಳ ಯಕ್ಷಗಾನ ಪ್ರದರ್ಶನಗಳಾದಾಗ “ರಂಗ ರೂಢಿ” ಗಳಾದ ಪ್ರವೇಶ ಒಡ್ದೋಲಗ ಇವುಗಳ ಲೋಪವಾಗಬಾರದೆಂಬ ಅಭಿಪ್ರಾಯ ಅಲ್ಲಿ ವ್ಯಕ್ತವಾಗುತ್ತದೆ.ನಮ್ಮ ಕಲೆಯ ಶ್ರೀಮಂತಿಕೆಯನ್ನು ನಮಗೇ ನೆನಪಿಸುವುದು. ಅದೂ ಯಕ್ಷಗಾನದ ಬಗ್ಗೆ ಏನೊಂದೂ ಅರಿವಿರದ ಕ್ಷೇತ್ರದಲ್ಲಿ ವ್ಯಕ್ತವಾಗುವ ಅಭಿಪ್ರಾಯ. ರಂಗದ ಒಂದು ಸರಳ ಪೀಠ  (ರಥ),  ಅದು  ಪರ್ವತ ಆಕಾಶ ರಥ ಸಿಂಹಾಸನ ಎಲ್ಲವೂ ಆಗುವುದು ಕಲೆಯ ಬಡತನವಲ್ಲ. ಆದರೆ ಇದರ ಅರಿವಿಲ್ಲದವರು ಇದನ್ನು ಬಡತವೆಂದೇ ಪರಿಗಣಿಸುವುದು ಯಕ್ಷಗಾನದ ದೊಡ್ಡ ದುರಂತ ಎನ್ನಬೇಕು. (ಉದಾಃ ವೇಷಗಳ ಪ್ರವೇಶಕ್ಕೆ ಇವರಿಗೆ  ಚೆಂಡೆ ಮದ್ದಲೆ ಸಾಕಾಗುವುದಿಲ್ಲ. ಢೋಲು ವಾದ್ಯಗಳ ಹರಟೆಯೇ ಬೇಕು ಅದಕ್ಕಾಗಿ ಸಾವಿರ ಸಾವಿರ ವೆಚ್ಚ ಮಾಡುತ್ತಾರೆ.ಅರ್ಥಾತ್ ಯಕ್ಷಗಾನವನ್ನು ನಾಶ ಮಾಡುವುದಕ್ಕೆ  ಕೊಡುವ ಸುಪಾರಿಯದು.)   ಅಲ್ಲಿ ನೈಜತೆಗೋಸ್ಕರ ವಾಸ್ತವದ ದೃಶ್ಯಗಳನ್ನು ನಿರ್ಮಿಸಿದರೆ ಅದು ಯಕ್ಷಗಾನದ ವಿಕೃತಿಯಾಗುತ್ತದೆ. ಯಕ್ಷಗಾನದಲ್ಲಿ ಕಣ್ಣಿಗೆ ದೃಶ್ಯ ಕೇವಲ ಸಂಕೇತವಾಗಿರುತ್ತದೆ. ಅದು ಅದೃಶ್ಯವಾಗಿ ಸಂಕೇತದಿಂದ ಪ್ರೇಕ್ಷಕನ ಕಲ್ಪನಾ ಸಾಮಾರ್ಥ್ಯವನ್ನೂ ಭ್ರಮಾ ಲೋಕದ ವಿಸ್ತಾರವನ್ನು ಹೆಚ್ಚಿಸುತ್ತದೆ. ಇಲ್ಲಿ ಸ್ನಾನ ಮಾಡುವಾಗ ತಲೆಗೆ ನೀರು ಸುರಿದುಕೊಳ್ಳುವುದಿಲ್ಲ. ಮೈ ಸುಡುವಾಗ ಬೆಂಕಿ ಹಚ್ಚಿಕೊಳ್ಳುವುದಿಲ್ಲ. ತಲೆ ಕಡಿಯುವಾಗ ತೊಟ್ಟು ರಕ್ತದ ಕಲೆಯೂ ಇರುವುದಿಲ್ಲ. ಎಲ್ಲವೂ ಪ್ರೇಕ್ಷಕನ ಕಲ್ಪನೆಗೆ ಭ್ರಮೆಗೆ ಬಿಡಲ್ಪಡುತ್ತದೆ. ಯಕ್ಷಗಾನ ಪ್ರೇಕ್ಷಕ ಭ್ರಮಾಧೀನನಾಗುವುದಿಲ್ಲ ಎಂದರೆ ಅದು ಸುಳ್ಳು. ಆದರೆ ಇಂದು ಪ್ರೇಕ್ಷಕನ ಕಲ್ಪನೆಯನ್ನು ಮೊಟಕುಗೊಳಿಸಲಾಗುತ್ತದೆ. ಚಿಂತನೆಯ ಅಸ್ತಿತ್ವವನ್ನು ನಾಶಮಾಡಲಾಗುತ್ತದೆ.  ಇಂದಿನ ಯಕ್ಷಗಾನದ ಸ್ಥಿತಿಗಳು ಪ್ರೇಕ್ಷಕನನ್ನು ಈ ಭ್ರಮಾಲೋಕದಿಂದ ದೂರ ಮಾಡಿ ಯಕ್ಷಗಾನ ಕೇವಲ ವಾಸ್ತವದ ಚಿತ್ರವಾಗಿ ಬದಲಾಗುತ್ತದೆ. ಯಕ್ಷಗಾನ ನಾಟಕವೂ ಅಲ್ಲ ಸಿನಿಮಾವೂ ಅಲ್ಲ ಅತ್ತ ನಾಟ್ಯ ಪ್ರಕಾರವೂ ಅಲ್ಲ. ಇಷ್ಟೆಲ್ಲಾ ಆದರೂ ಅಲ್ಲಿಲ್ಲದೇ ಇದ್ದದ್ದು ಇಲ್ಲಿ ಇದೆ. ಅದೇ ಯಕ್ಷಗಾನದ ಸಂಪತ್ತು. ಆದರೆ ನಾಟಕ ನೈಜತೆ  ಅದನ್ನೆಲ್ಲವನ್ನೂ ಅಲ್ಲಿ ಕಾಣುವ ಪ್ರೇಕ್ಷಕ ಇಲ್ಲಿ ಕಾಣ ಬಯಸುವುದು ಬೇರೆಯದನ್ನೆ. ಅದನ್ನೇ ಮತ್ತೂ ಇಲ್ಲಿ ಬಿಡಿ ಬಿಡಿಯಾಗಿ ತೋರಿಸಿದರೆ? ಯಕ್ಷಗಾನದ ಸ್ಥಿತಿಗತಿಯ ವಾಸ್ತವ ಇದು. ಇದಕ್ಕೆಲ್ಲ ರಂಗಭೂಮಿಯ ತತ್ವವನ್ನು ಅರಿಯಬೇಕು. ಆ ಅರಿವು ಈ ಪುಸ್ತಕದಲ್ಲಿದೆ.

ಯಕ್ಷಗಾನ ಕಲಾ ಸ್ವರೂಪವೆಂಬ ಎರಡನೇ ಭಾಗದಲ್ಲಿ ಯಕ್ಷಗಾನದ ಅಮೂಲಾಗ್ರ ವಿವರಣೆಯಿದೆ. ಪಠ್ಯ ಪುಸ್ತಕದ ವಿವರಣೆಗಳಿವು. ಇಲ್ಲಿ ಸ್ಥೂಲವಾಗಿ ಸಿಗುವ ಮಾಹಿತಿಯೇ ಯಕ್ಷಗಾನ ರಚನೆಯನ್ನು ಬಹಳಷ್ಟು ವಿವರಿಸುತ್ತದೆ.

ಯಕ್ಷಗಾನ ತಾಳ ಮದ್ದಲೆ ಅದು ಒಂದು ಕಲೆಯೇ ಅಲ್ಲ ಎಂದು ಸಾಹಿತ್ಯ ಸಮ್ಮೇಳನ ಒಂದರಲ್ಲಿ  ಹಿರಿಯ ವಿದ್ವಾಂಸರೊಬ್ಬರು ಹೇಳಿದ್ದರು.  ಅದರ ಬಗ್ಗೆ ಇರುವ ವಿಮರ್ಶೆ ಬಹಳ ಮಾರ್ಮಿಕವಾಗಿದೆ.. ಅದಕ್ಕೆ ಯಾರ ಅನುಗ್ರಹ ಮನ್ನಣೆಯ ಕೊಡುಗೆ ಮೇಲಿನಿಂದ ಕೊಡುವ ಒಪ್ಪಿಗೆ ಅಗತ್ಯವಿಲ್ಲ. ತಾಳ ಮದ್ದಲೆ ಕಲೆಯಲ್ಲದಿದ್ದರೆ ಬೇಡ , ಅದು ತಾಳ ಮದ್ದಲೆ ಎಂದೇ ಕರೆಯಬಹುದು. ಇದಕ್ಕೆ ಹಲವಾರು ಟಿಪ್ಪಣಿಗಳು ಇಲ್ಲಿವೆ. ಊರಲ್ಲಿ ಭಜನೆ ಮಾಡುವಾತನಲ್ಲಿ ಶಾಸ್ತ್ರಿಯ ಸಂಗೀತದ ರಾಗದ ಬಗ್ಗೆ ಹೇಳಿ ಭಜನೆಯೇ ಶಾಸ್ತ್ರೀಯವಾಗಿಲ್ಲ ಎಂದು ಹೇಳುವುದು ಎಷ್ಟು ಸರಿ? ಅದು ಭಜನೆ ಹೊರತು ಸಂಗೀತ ಕಛೇರಿಯಲ್ಲ. ಅಲ್ಲಿ ರಾಗಕ್ಕೆ ಪ್ರಾಮುಖ್ಯತೆ ಇಲ್ಲ.  ಯಕ್ಷಗಾನಕ್ಕೆ ಈ ಮಾತು ಬಹಳ ಅನ್ವಯವಾಗುತ್ತದೆ. ಇಲ್ಲಿನ ಅರ್ಥಗಾರಿಕೆಯಾಗಲಿ ಕುಣಿತ ವೇಷಗಾರಿಕೆಯ ಬಗ್ಗೆ ಹಲವು ಕಡೆ ಅಭಾಸ ಎನ್ನಬಹುದಾದ ವಿಶ್ಲೇಷಣೆ ಪ್ರತಿಕ್ರೆಯಗಳನ್ನು ನಾವು ಕಾಣುತ್ತೇವೆ. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ಕಂಡುಕೊಳ್ಳಲಾಗಿದೆ. ಯಕ್ಷಗಾನ ಅದು ಕೇವಲ ಯಕ್ಷಗಾನ ಒಂದು ಸ್ವತಂತ್ರ ಕಲೆ.  

ಯಕ್ಷಗಾನದ ಬಗ್ಗೆ ಹಲವಾರು ಸೂಕ್ಷ್ಮ ವಿಶ್ಲೇಷಣೆಗಳಿವೆ. ಅದು ಹಿಮ್ಮೇಳ ಕುಣಿತ  ಬಣ್ಣಗಾರಿಕೆ ಅರ್ಥಗಾರಿಕೆ ಹೀಗೆ ಪ್ರತಿಯೊಂದು ಅಂಶವನ್ನು ಯಥಾ ಸಾಧ್ಯ ಹಿಂಬಾಲಿಸಿ ವಿಶ್ಲೇಷಿಸಲಾಗಿದೆ. ಕೆಲವೆಲ್ಲ ಗಾಬರಿ ಎನ್ನುವಷ್ಟು ಚಿಂತನೆಗಳನ್ನು ಸ್ಫುರಿಸುತ್ತವೆ. ಯಕ್ಷಗಾನವೆಂದರೆ ಅದು ಕೇವಲ ಹಿಮ್ಮೇಳ ಮುಮ್ಮೇಳ ಕುಣಿತ ವೇಷಗಾರಿಕೆ ಯಲ್ಲ. ಅಲ್ಲಿರುವ ವ್ಯಾಪಾರೀ ವ್ಯವಹಾರಗಳು ಕಲಾವಿದರ  ಜೀವನ ಸಂಘಟನೆಯ ಸಮಸ್ಯೆ, ಪ್ರೇಕ್ಷಕ ಚಿಂತನೆ ಹೀಗೆ  ಈ ಎಲ್ಲದರ ಬಾಹುಳ್ಯತೆಯ ವಿಪುಲ ಚಿಂತನೆ ಇಲ್ಲಿದೆ.

ಯಕ್ಷಗಾನದಲ್ಲಿ ಚಿತ್ರಾಭಿನಯದ ಕುರಿತು ವೈಚಾರಿಕ ವಿಶ್ಲೇಷಣೆ ಇದೆ. ಬಹುಶಃ ಇಂದಿನ ಕಲಾವಿದರಲ್ಲಿ ಎಷ್ಟು ಮಂದಿಗೆ ಚಿತ್ರಾಭಿನಯದ ಬಗ್ಗೆ ಮಾಹಿತಿ ಇದೆಯೋ ತಿಳಿಯದು. ಅಭಿನಯ ಎಂದರೆ ಪ್ರೇಕ್ಷಕನಲ್ಲಿಗೆ ಭಾವನೆಗಳನ್ನು ಕೊಂಡುಹೋಗುವುದು ಎಂದರ್ಥ. ಇದಕ್ಕಾಗಿ ಹಲವು ಅಂಶಗಳನ್ನು ಬಳಸಿಕೊಳ್ಳುತ್ತಾರೆ. ಆಂಗಿಕ ವಾಚಿಕ ಆಹಾರ್ಯ ಮತ್ತು ಸಾತ್ವಿಕ. ಅಂಗಗಳಿಂದ ಮಾತಿನಿಂದ ವೇಷಗಳಿಂದ ಮತ್ತು ಸಾತ್ವಿಕ ಇದ್ದು ಭಾವನೆಯ ಉತ್ಕಟತೆಯ ದರ್ಶನ. ಇವುಗಳೆಲ್ಲ ಪ್ರೇಕ್ಷಕನಲ್ಲಿಗೆ ತಲುಪಿಸುವ ಮಾಧ್ಯಮಗಲು. ಯಕ್ಷಗಾನದಲ್ಲಿ ಎರಡು ಹಂತಗಳಲ್ಲಿ ಅಭಿನಯ ವ್ಯಕ್ತವಾಗುತ್ತದೆ ಒಮ್ಮೆ ಹಿಮ್ಮೇಳದ ಹಾಡುಗಾರಿಕೆಯೊಂದಿಗೆ ನಂತರ ಸಂಭಾಷಣೆಯೊಂದಿಗೆ. ಇವುಗಳಲ್ಲಿ ಮೂರು ವಿಧಾನಗಳನ್ನು ಬಹಳ ವಿಸ್ತೃತವಾಗಿ ಮತ್ತು ಮಾರ್ಮಿಕವಾಗಿ ವಿವರಿಸಲ್ಪಟ್ಟಿದೆ. ಇದು ಕಾಲ ಕಾಲಕ್ಕೆ ಹೇಗೆ ಬದಲಾವಣೆ ಕಂಡಿತು, ನಂತರದಲ್ಲಿ ಅದು ಹೇಗೆ ಅತಿಯಾಗಿ ಬಳಕೆಯಾಗಿ ಕೆಲವೆಲ್ಲ ಹೇಗೆ ಅಭಾಸವಾಗಿ ಮೂಲ ರಂಗ ವಿಧಾನಗಳನ್ನು ಬದಿಗೆ ಸರಿಸಿತು ಎಂಬುದನ್ನು ವಿವರಿಸಿದ್ದಾರೆ.

ಯಕ್ಷಗಾನದಲ್ಲಿ ಭಾವಾಭಿನಯ ಯಾವ ರೀತಿಯಲ್ಲಿರಬೇಕು, ಅದು ಕ್ರಮ ತಪ್ಪಿದಾಗ ಅಭಾಸವಾಗುತ್ತದೆ. ಭರತನಾಟ್ಯ ಅಥವಾ ಇನ್ನಾವುದೇ ನರ್ತನ ಪ್ರಕಾರದಿಂದ ಯಕ್ಷಗಾನ ಭಾವಾಭಿನಯ ಹೇಗೆ ಭಿನ್ನವಾಗಿದೆ ಎಂಬುದನ್ನು ಬಹಳ ಅರ್ಥವತ್ತಾಗಿ ವಿವರಿಸಿದ್ದಾರೆ. ಬಹಳ ಸೂಕ್ಷ್ಮವಿಚಾರಗಳ ಮಂಡನೆ ಇಲ್ಲಿದೆ. ಉದಾಃ ಯುದ್ದ ವಿಕ್ರಮದಲ್ಲಿ ನೀ ಮಡಿದೆಯಲ್ಲಾ ಎಂದು ತಂದೆ ರೋದಿಸುವಾಗ ಅಲ್ಲಿ ವಿಕ್ರಮವನ್ನು ವಿವರಿಸುವುದು ಅಥವಾ ತೋರಿಸುವುದು ಆಭಾಸವಾಗುತ್ತದೆ. ಅಲ್ಲಿ ವಿಕ್ರಮವೆಂದು ಕೇವಲ ನೆನಪು ಅಷ್ಟೇ.  ಯಾಕೆಂದರೆ ಅಲ್ಲಿ ಮುಖ್ಯವಾಗಿ ಇರುವುದು ತಂದೆಯಾದವನ ದುಃಖ. ಆದರೆ ಇಂದು ಈ ತತ್ವಗಳನ್ನು ತಿಳಿಯದೆ ಯಕ್ಷಗಾನ ಪಾತ್ರಧಾರಿಯಾಗುವುದನ್ನು ಕಾಣುತ್ತೇವೆ.

ಹೆಚ್ಚಿನ ಎಲ್ಲಾ ವಿಚಾರಗಳಲ್ಲೂ ಚಿಂತನೆ ನಡೆಸಿದ ಅಮೂಲ್ಯ ಲೇಖನ ಮಾಲೆ ಇದು. ಬಹಳ ಸೂಕ್ಷ್ಮ ವಿಚಾರಗಳಲ್ಲೂ ಕೈಗಾರಿಕೆ ನಡೆಸಿದ್ದಾರೆ. ಒಂದು ಪುಟ್ಟ ಪುಸ್ತಕದಲ್ಲಿ ಇಷ್ಟೇಲ್ಲಾ ಮಾಹಿತಿಗಳನ್ನು ವಿಶ್ಲೇಷಣೆ ಮಾಡಿ ಮನವರಿಕೆಯಾಗುವಂತೆ ಮಾಡುವುದು ನಿಜಕ್ಕೂ ಸಾಹಸದ ಕೆಲಸ. ಇನ್ನೊಂದು, ಯಾವುದೇ ವಿಚಾರದ ಬಗ್ಗೆ ಬಹಳ ದೀರ್ಘವಾದ ವಿವರಣೆ ಕೆಲವೊಮ್ಮೆ ಆಕರ್ಷಣೆಯನ್ನು ಉಳಿಸಿಕೊಳ್ಳುವುದಿಲ್ಲ. ತಿಳಿದುಕೊಳ್ಳುವವನ ಉತ್ಸಾಹ ಶ್ರದ್ದೆಯನ್ನು ಅವಲಂಬಿಸಿರುತ್ತದೆ. ಹಾಗಾದುದರಿಂದಲೇ ಈ ಪುಸ್ತಕದ ಲೇಖನಗಳು ಆಕರ್ಷಣೀಯವಾಗುವುದು. ಸ್ವತಃ ಪ್ರಾಧ್ಯಾಪಕರಾದ ಜೋಷಿಯವರು ಇದರಲ್ಲಿ ಯಶಸ್ವಿಯಾಗಿದ್ದಾರೆ. ಲೇಖನಗಳು ತಾಂತ್ರಿಕವಾಗಿಯೂ ಉತ್ತಮವಾಗಿ ತೋರುತ್ತದೆ.

ಪುಸ್ತಕವನ್ನು ಸಮಗ್ರವಾಗಿ ಓದಿ ಮುಗಿಸಿದಾಗ ಮತ್ತೂ ಒಂದು ಮುಖ್ಯ ಅನಿಸಿಕೆ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸಬೇಕು. ಯಕ್ಷಗಾನದ ಬಗ್ಗೆ ಹೇಳುವಾಗ ಹೀಗಿತ್ತು ಹೀಗಾಗಬೇಕು ಎಂದು ಹಲವು ವಿಚಾರಗಳ ಮಂಡನೆಯನ್ನು ಸೂಕ್ತವಾಗಿ ಮಾಡಿದ್ದಾರೆ. ಆದರೆ ಕೆಲವೊಂದು ಕಡೆಗಳಲ್ಲಿ ಹೀಗೂ ಮಾಡಬಹುದು, ಹೀಗೂ ಆಗಬಹುದು ಎಂದು ತೃಪ್ತರಾಗಬಯಸುವ ನಿಲುವು ಕಂಡು ಬರುತ್ತದೆ. ಜೋಷಿಯವರದ್ದು ಯಕ್ಷಗಾನದಲ್ಲಿ ಒಂದು ಗುರು ಸ್ಥಾನ. ಬಹಳ ಹಿರಿಯ ವ್ಯಕ್ತಿತ್ವ. ಯಕ್ಷಗಾನವನ್ನು ಅಮೂಲಾಗ್ರವಾಗಿ ಕಂಡುಕೊಂಡು ಅನುಭವಿಸಿದವರು. ಅವರ ಮಾತು ಅಭಿಪ್ರಾಯಗಳು ಸರ್ವಮಾನ್ಯತೆಯನ್ನು ಗಳಿಸುವ ಅರ್ಹತೆಯನ್ನು ಗಳಿಸುತ್ತವೆ. ಹಾಗಾಗಿ ಹೀಗೂ ಆಗಬಹುದು  ಎಂದು ಹೇಳುವುದಕ್ಕಿಂತ ಹೀಗೇಯೇ ಆಗಬೇಕು ಎಂದು ಹೇಳುವುದು ಸೂಕ್ತ ಅನ್ನಿಸುತ್ತದೆ. ಹಾಗಾಗಿ ನಿರ್ದಿಷ್ಟವಾಗಿ ವಸ್ತುನಿಷ್ಠರಾಗಿ ಹೇಳುವಂತಾಗಬೇಕು. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ. ಆದರೆ ಚರಿತ್ರೆಗೆ ಸೇರುವ ಅಭಿಪ್ರಾಯಗಳು ಅತ್ಯಂತ ವಸ್ತು ನಿಷ್ಠವಾಗಿರುವಾಗ ವ್ಯಕ್ತಿತ್ವವೂ ಚರಿತ್ರೆಗೆ ದಾಖಲಾಗುತ್ತದೆ. ಇದು ನನ್ನ ಅನಿಸಿಕೆಗೆ ಸೀಮಿತವಾದ ಅಭಿಪ್ರಾಯ.

ಕಲಾವಿದನಾಗುವವನು ಯಕ್ಷಗಾನದ ಬಗ್ಗೆ ತುಸುವಾದರೂ ತಿಳಿಯಬೇಕೆಂಬ ಆಸಕ್ತಿಯಿರುವವನು ಇದನ್ನು ಅವಶ್ಯ ಓದಬೇಕು. ಬಹುಶಃ ಯಕ್ಷಗಾನದ ಒಂದು ಕೊರತೆ ಇದುವೇ ಆಗಿರಬಹುದು, ಅದು ಓದುವಿಕೆ ಅಥವಾ  ಅಧ್ಯಯನ ಅದು ಪ್ರತಿ ಕಲಾವಿದನಲ್ಲೂ ಪ್ರೇಕ್ಷಕನಲ್ಲೂ ಜಾಗ್ರತವಾಗಬೇಕು.

error: Content is protected !!
Share This