ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಕಲಾಪೋಷಕ ಶ್ರೀಪತಿ ಭಟ್, ಗೌರವ ಪ್ರಶಸ್ತಿಗೆ ‘ಯಕ್ಷ ಶಾಂತಲಾ’ ಪಾತಾಳ ವೆಂಕಟರಮಣ ಭಟ್ ಆಯ್ಕೆ

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಕೊಡಮಾಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಮೂಡಬಿದಿರೆಯ ಉದ್ಯಮಿ, ಕಲಾಪೋಷಕ ಶ್ರೀಪತಿ ಭಟ್ ಆಯ್ಕೆಯಾಗಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯು ‘ಯಕ್ಷ ಶಾಂತಲಾ’ ಬಿರುದಾಂಕಿತ ಹಿರಿಯ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ಟರಿಗೆ ಲಭಿಸಲಿದೆ.
ಶ್ರೀಪತಿ ಭಟ್:
ಉದ್ಯಮಿ, ದಾನಿಯಾಗಿ ಯಕ್ಷಗಾನ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶ್ರೀಪತಿ ಭಟ್ಟರು 2021ರಲ್ಲಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ನೆರವು ನೀಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಹಿಳಾ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ನೆರವು ಒದಗಿಸುತ್ತಿದ್ದಾರೆ.
ಪಾತಾಳ ವೆಂಕಟ್ರಮಣ ಭಟ್ :
ಪಾತಾಳ ವೆಂಕಟ್ರಮಣ ಭಟ್ಟರಿಗೆ ಪ್ರಸ್ತುತ ೮೮ರ ಇಳಿವಯಸ್ಸು. ಪ್ರಾಥಮಿಕ ಹಂತದಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ನೀಡಿ 1953ರಲ್ಲಿ ಕಾಂಚನ ಲಕ್ಷ್ಮೀನಾರಾಯಣ ಯಕ್ಷಗಾನ ನಾಟಕ ಮಂಡಳಿಯಲ್ಲಿ ಗುರುಕುಲ ಮಾದರಿಯ ಯಕ್ಷಗಾನ ಮೂಲ ಪಾಠಕಲಿತ ಅವರು, ಬಡಗಿನ ಸೌಕೂರು ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. 1957ರಿಂದ ಮೂಲ್ಕಿ ಮತ್ತು ಸುರತ್ಕಲ್ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ಮುನ್ನಡೆದು 1964 ರಿಂದ ಧರ್ಮಸ್ಥಳ ಮೇಳದಲ್ಲಿ ಸೇವೆಗೈದು 1981ರಲ್ಲಿ ರಂಗದಿಂದ ನಿವೃತ್ತರಾದರು. ರಂಭೆ, ಊರ್ವಶಿ, ಮೇನಕೆ, ಮೋಹಿನಿ, ಮಾಯಾಶೂರ್ಪನಖಿ, ಗುಣಸುಂದರಿ, ಅಂಬೆ, ಕೈಕೆ, ಮಾಯಾಅಜಮುಖಿ, ಪೂತನಿ, ಶ್ರೀದೇವಿ, ದ್ರೌಪದಿ, ದಿತಿ, ಮಾಲಿನಿ, ಗೌರಿ, ಅಮ್ಮುದೇವಿ, ಪುಲ್ಲಪೆರ್ಗಡ್ತಿ ಮುಂತಾದ ಪಾತ್ರಗಳನ್ನು ಉತ್ಕಷ್ಟ ರೀತಿಯಲ್ಲಿ ನಿರ್ವಹಿಸಿದರು.
ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ಡಿ. 18 ಮತ್ತು 19ರಂದು ಮಂಗಳೂರಿನಲ್ಲಿ ಜರಗುವ ಒಂಭತ್ತನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ-2021’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರಗಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.




