ಪ್ರಶ್ನೆ: ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರಸಂಗದಲ್ಲಿ ಕೆಲವು ತಾರ್ಕಿಕ ಅಸಂಬದ್ಧತೆಗಳು ಕಾಣುತ್ತವೆ.

1. ದೃಢವರ್ಮ ರಾಜನು ಚಿತ್ರಧ್ವಜನಲ್ಲಿ ಪರಾಜಿತನಾಗಿ ಮಿತ್ರನಾದ ವಿಂಧ್ಯಕೇತನೆಂಬ ಕಿರಾತರಾಜನನ್ನು ನೆನೆದಾಗ, ಆತನು ಕೂಡಲೇ ಬರುವುದು! ಈ ರೀತಿ ನೆನೆದಾಗ ಬರುವ ಪೌರಾಣಿಕ, ದೈವಿಕ ಹಿನ್ನೆಲೆಯೂ ಆ ಪಾತ್ರಗಳಿಗಿಲ್ಲ.

2. ಭದ್ರಸೇನನು ದೃಢವರ್ಮನನ್ನು ಸೋಲಿಸಿ ಅವನ ಮಗಳನ್ನು ಅವಳು ಮಲಗಿದ್ದ ಮಂಚ ಸಮೇತ ಎತ್ತಿ ಮಾಳಿಗೆ ಇಳಿದು ಹೊತ್ತುಕೊಂಡು
ದಿಂಡೀರವನಕ್ಕೊಯ್ಯುವುದು!

3. ವತ್ಸರಾಜ (ವಾಖ್ಯ)ನು ಬೇಟೆಗೆ ಬಂದು ರಾಕ್ಷಸನ ಮಂದಿರದಲ್ಲಿ ರತ್ನಾವತಿಯನ್ನು ಕಂಡು ತಾನೇ ವಾಖ್ಯನೆಂದಾಗ ಅವಳು ಆತನನ್ನು ಬಿಗಿದಪ್ಪುವುದು! ಮೊದಲು ಅವರು ಒಬ್ಬರನ್ನು ಒಬ್ಬರು ನೋಡಿದಂತೆ ಪರಿಚಿತರಾಗಿರುವಂತೆ ಕತೆಯಲ್ಲಿ ಸೂಚನೆ ಇಲ್ಲ. ಇದೆಲ್ಲ ಉಚಿತವೆ?

ಪಿ. ಶಂಕರ್ ಭಟ್, ಪೂಕಲ, ಇಡ್ಕಿದು

ಉತ್ತರ: ಈ ಪ್ರಶ್ನೆಗಳು ವಾಸ್ತವ ಮತ್ತು ತಾರ್ಕಿಕ ನೆಲೆಯಿಂದ ಬಂದವುಗಳು. ಆದರೆ ರಮ್ಯ ರಂಜಕ ಕರೆಗಳಲ್ಲಿ ಇವು ಅಷ್ಟು ಪ್ರಸ್ತುತವಲ್ಲ.

ರತ್ನಾವು ಪ್ರಸಂಗಕ್ಕೆ ಆಧಾರ ಶ್ರೀಹರ್ಷನ ಪ್ರಿಯದರ್ಶಿಕಾ, ಅದಕ್ಕೆ ಆಧಾರ ಗುಣಾಡ್ಯನ ಬೃಹತ್ಕಥ. ಈ ಇಂತಹ ಕಥಾಪರಂಪರೆಗಳಲ್ಲಿ ಅಸಂಭವ, ವಿಸ್ಮಯ, ವೇಷಾಂತರ, ಅಪಹಾರ, ಜಾದೂ, ಅಪರಿಚಿತರ ಮಿಲನ ಇಂತಹವು ಸಾಮಾನ್ಯ. ಜಗತ್ತಿನಾದ್ಯಂತ ಕಥೆಗಳಲ್ಲಿ ಹಾಗೆಯೇ ಇದೆ. ಕತೆಗಳ ರೂಪವೂ ಹಾಗೆಯೇ, ನಿಶ್ಚಿತ ವಿನ್ಯಾಸದ (patternised) ಮತ್ತು ವಿಶಿಷ್ಟ ಕಥಾಂಶಗಳ (motiffs) ಗಳು ಸಾಮಾನ್ಯ. ಉದಾ: ರಾಜನ ಪ್ರೇಯಸಿ
ಅರಮನೆಯಲ್ಲಿ ವೇಷಧಾರಿಯಾಗಿರುವುದು ರಾಜ-ರಾಣಿ ಇಬ್ಬರಿಗೂ ತಿಳಿಯದಿರುವುದು, ಕೃತಕ ಆನೆಯಗುರುತೇ ಆಗದಿರುವುದು (ಮಹಾಕವಿ ಭಾಸನ
ವಾಸವದತ್ತ, ಪ್ರತೀಜ್ಞಾಯೌಗಂಧರಾಯಣ ನಾಟಕಗಳು), ಮಹಾಕವಿ ಶೇಕ್ಸ್‌ಪಿಯರ್‌ನ ಮರ್ಚಂಟ್ ಆಫ್ ವೆನಿಸ್ ನಾಟಕದಲ್ಲಿ ಪೋರ್ಷಿಯಾಳು ವಕೀಲನಾಗಿ ವೇಷ ಧರಿಸಿ ವಾದಿಸಿದಾಗ ನ್ಯಾಯಾಧೀಶರಿಗೆ ಅವಳು ಹೆಣ್ಣೆಂದು ತಿಳಿಯದಿರುವುದು, ಮ್ಯಾಕ್‌ಬೆತ್ ನಾಟಕದಲ್ಲಿ ಗಿಡಗಳನ್ನು ಹಿಡಿದು ಜನರು ನಡೆವಾಗ ಅದು ತಿಳಿಯದೇ ವನವೇ ನಡೆದಂತೆ ಕಾಣುವುದು – ಇವೆಲ್ಲ ಅವಾಸ್ತವವೇ. ನಾವು ನಂಬಬೇಕು, ರಸಕ್ಕಾಗಿ, ಯಾವುದೋ ಕಥಾ
ಪರಿಣಾಮಕ್ಕಾಗಿ. ಸಹೃದಯತೆಯಲ್ಲಿ ಒಂದು ಪ್ರಮಾಣದಲ್ಲಿ ಒಪ್ಪಿಗೆ ಅಗತ್ಯ.

ಕಥಾ ವಿಮರ್ಶೆಯ ದೃಷ್ಟಿಯಿಂದ ಹೇಳುವುದಾದರೆ – ಬೃಹತ್ಕಥೆಯಂಥ ರಮ್ಯ ಪಾರಂಪರಿಕ ಕತೆಗಳ ಹಂದರ ಸಾಮಾನ್ಯ ಮಟ್ಟದ್ದು ಎಂಬುದು ಸತ್ಯ.

ಡಾ| ಎಂ. ಪ್ರಭಾಕರ ಜೋಶಿ

ಕೃಪೆ : ಉದಯವಾಣಿ ಲಲಿತರಂಗ

error: Content is protected !!
Share This