ಸಂಶೋಧಕ, ಸಂಸ್ಕೃತಿ ಚಿಂತಕ, ಅರ್ಥಧಾರಿ, ಸಂಘಟಕ ಪ್ರಭಾಕರ ಜೋಶಿಗೆ ಅಭಿನಂದನೆ

ಯಕ್ಷಗಾನವೆಂಬ ಪಾರಂಪರಿಕ ಕಲೆಯನ್ನು ಅದರ ಕಲಾಮಿತಿಯಿಂದ ಎತ್ತರಿಸಿ, ಒಳನೋಟಗಳನ್ನು ವಿಸ್ತರಿಸಿ ಅದನ್ನೊಂದು ಚಿಂತನಾ ಕ್ಷೇತ್ರವನ್ನಾಗಿಸಿದ ಮಹನೀಯರು ಸಿಕ್ಕಿದರೆ ಬೆರಳಣಿಕೆಯಷ್ಟು. ಅವರಲ್ಲಿ ಅಗ್ರಪಂಕ್ತಿಗೆ ಸಲ್ಲುವವರು ಡಾ. ಎಂ. ಪ್ರಭಾಕರ ಜೋಶಿ. ವಿದ್ವದ್ವಲಯದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿ ಅವರದು ಈಡಿಲ್ಲದ ಸಾಧನೆ. ಅವರು ಲೇಖಕ, ವಿಮರ್ಶಕ, ಅರ್ಥಧಾರಿ, ಸಂಘಟಕ, ವಾಗ್ಮಿ, ವಿಚಾರವಾದಿ, ಸಾಹಿತಿ, ಸಂಪನ್ಮೂಲ ವ್ಯಕ್ತಿ, ಅದಕ್ಕಿಂತಲೂ ಮಿಗಿಲಾಗಿ ವರ್ತಮಾನದ ಶ್ರೇಷ್ಠ ಚಿಂತಕ.

ಮಾಳ ಪ್ರಭಾಕರ ಜೋಶಿ ಕರಾವಳಿ ಜಿಲ್ಲೆಗಳ ಓರ್ವ ಸಾಂಸ್ಕೃತಿಕ ವಕ್ತಾರನಾಗಿ, ಅಖಿಲ ಕರ್ನಾಟಕ ವ್ಯಾಪ್ತಿಯ ಪ್ರಬುದ್ಧ ವಿಮರ್ಶಕನಾಗಿ, ಕನ್ನಡದ ಅನೇಕ ಹಿರಿಯ ವಿದ್ವಾಂಸರ ಪ್ರಶಂಸೆಗೆ ಪಾತ್ರರಾದ ಸಾಧಕರು. ಶೇಣಿ-ಸಾಮಗರ ಬಳಿಕದ ತಲೆಮಾರಿನ ಶ್ರೇಷ್ಠ ಅರ್ಥಧಾರಿ. ಶಿವರಾಮ ಕಾರಂತರ ಅನಂತರ ಯಕ್ಷಗಾನ ರಂಗದ ಸಂಶೋಧನೆ, ಅಧ್ಯಯನ ಮತ್ತು ವಿಚಾರ- ವಿನಿಮಯಗಳಿಗಾಗಿ ದೇಶ-ವಿದೇಶಗಳಲ್ಲಿ ಮಾನ್ಯರಾದ ಬಹುಶೃತ ವಿದ್ವಾಂಸರು. ನೋಡನೋಡುತ್ತಿದ್ದಂತೆ 70 ತುಂಬಿ ಮುಂದಡಿಯಿಡುತ್ತಿರುವ ಜೋಶಿಯವರ ಈ ಸುದೀರ್ಘ ಪಯಣ ಆರೇಳು ದಶಕಗಳ ಯಕ್ಷಗಾನ ಇತಿಹಾಸದೊಂದಿಗೆ ಹಾಸುಹೊಕ್ಕಾಗಿರುವುದನ್ನು ಕಂಡರೆ, ಯಕ್ಷಗಾನ ಅದರಲ್ಲೂ ತಾಳಮದ್ದಳೆ ಲೋಕದ ಅಪೂರ್ವ ಸಂಗತಿಗಳು ನಮ್ಮ ಅರಿವಿಗೆ ಬಾರದಿರದು. ಪ್ರಭಾಕರ ಜೋಶಿಯವರ ತಂದೆ ನಾರಾಯಣ ಜೋಶಿ, ತಾಯಿ ಲಕ್ಷ್ಮೀಬಾಯಿ ಯಾನೆ ಚಂದ್ರಾವತಿ. ಕಾರ್ಕಳ ತಾಲೂಕಿನ ಮಾಳದಲ್ಲಿ 1946ರ ಫೆ. 6ರಂದು ನಾಲ್ವರು ಸಹೋದರರಲ್ಲಿ ಮೂರನೇಯವರಾಗಿ ಜನಿಸಿದವರು. ನಾರಾಯಣ ಜೋಶಿಯವರು ವೇದ, ಶಾಸ್ತ್ರ, ಸಂಸ್ಕೃತ ಸಾಹಿತ್ಯ ವಿದ್ವಾಂಸರು. ಲಕ್ಷ್ಮೀಬಾಯಿಯವರ ತಂದೆ ಅನಿರುದ್ಧ ಮರಾಠೆ ತೆಂಕು ಮತ್ತು ಬಡಗು ಎರಡೂ ಶೈಲಿಗಳನ್ನು ಬಲ್ಲ ಉತ್ತಮ ಮದ್ದಳೆಗಾರರು.

ಸಹಜವಾಗಿಯೇ ತಂದೆ-ಅಜ್ಜಂದಿರ ಪ್ರಭಾವದಿಂದ ಪ್ರಭಾಕರ ಜೋಶಿ ಯಕ್ಷಗಾನ ಮತ್ತು ಸಾಹಿತ್ಯದ ಕಡೆಗೆ ಆಕರ್ಷಿತರಾದರು. ಇನ್ನೂ 10ರ ಬಾಲಕರಿದ್ದಾಗಲೇ ದೊಡ್ಡ ಕೂಟದಲ್ಲಿ ಅರ್ಥ ಹೇಳಿದ್ದರಂತೆ! ಆಗ ಅವರು ಓದುತ್ತಿದ್ದುದು 4ನೇ ತರಗತಿ.

ಮಾಳ, ಉಜಿರೆ, ಕಾರ್ಕಳಗಳಲ್ಲಿ ವಿದ್ಯಾಭ್ಯಾಸದ ವಿವಿಧ ಮಜಲುಗಳನ್ನು ಪೂರೈಸುತ್ತಿದ್ದಂತೆಯೇ ಕಾರ್ಕಳ ಪರಿಸರದಲ್ಲಿ ನಡೆಯುತ್ತಿದ್ದ ಹಲವು ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಾ ಅವರು ಅರ್ಥಧಾರಿಯಾಗಿ ಬೆಳೆದರು. ಜೊತೆಗೆ ಬಯಲಾಟದಲ್ಲೂ ವೇಷ ಮಾಡತೊಡಗಿದರು. ಯಕ್ಷಗಾನದ ಮೇಲಿನ ಆಸಕ್ತಿ ಎಷ್ಟಿತ್ತೆಂದರೆ ಒಂದು ಹಂತದಲ್ಲಿ ಮೇಳ ಸೇರಲು ಮುಂದಾಗಿದ್ದರು. ಆಗ ‘ಈ ದಶಾವತಾರ ನಿನಗೆ ಬೇಡ’ ಎಂದು ಅವರನ್ನು ತಡೆದವರು ಸುರತ್ಕಲ್ ಮೇಳದ ಕಸ್ತೂರಿ ವರದರಾಯ ಪೈಗಳು.
ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ವಾಣಿಜ್ಯ ಶಾಸ್ತ್ರವನ್ನು ಆರಿಸಿಕೊಂಡಿದ್ದ ಜೋಶಿ ತಮ್ಮ ಎಂ.ಕಾಂ. ವ್ಯಾಸಂಗ ಮುಗಿಸಿದ ತಕ್ಷಣ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ವೃತ್ತಿಯೊಂದಿಗೆ ಆಟ, ತಾಳಮದ್ದಳೆ, ಭಾಷಣ, ಬರವಣಿಗೆ…. ಹೀಗೆ ನಿರಂತರ ಕ್ರಿಯಾಶೀಲರಾಗಿ ಅವರ ಸಾರ್ವಜನಿಕ ಸಂಪರ್ಕ ಬೆಳೆಯಿತು. ಸುರತ್ಕಲ್ ಬಿಟ್ಟು 1972ರಲ್ಲಿ ಮಂಗಳೂರಿನ ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇರಿದ ಅವರು, ಅಲ್ಲೇ ಪ್ರಾಂಶುಪಾಲರಾಗಿ ಭಡ್ತಿ ಪಡೆದು ಸತತ 32 ವರ್ಷಗಳ ಸೇವೆಯೊಂದಿಗೆ 2004ರಲ್ಲಿ ನಿವೃತ್ತರಾದರು. ಬಳಿಕ ಹಲವು ಕಡೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ 10 ವರ್ಷಗಳಿಂದ ಯಕ್ಷಗಾನ ವಲಯದಲ್ಲಿ ಅವರದು ಬೀಸುನಡೆ.

ಅರ್ಥಗಾರಿಕೆಯ ಹೊಸಮಟ್ಟು

ಬಯಲಾಟಕ್ಕೆ ತಿಟ್ಟು-ಮುಟ್ಟುಗಳಿದ್ದಂತೆ ತಾಳಮದ್ದಳೆಗೆ ಅದಿಲ್ಲ. ಆದರೂ ಹಳೆಯ ಜಾಡಿನಲ್ಲೇ ಹೊರಳುತ್ತಿದ್ದ ಯಕ್ಷಗಾನ ಕೂಟಗಳಿಗೆ ಒಂದು ಹೊಸ ಕ್ಷಿತಿಜ ತೆರೆದುಕೊಟ್ಟವರು ಶೇಣಿ ಗೋಪಾಲಕೃಷ್ಣ ಭಟ್ಟರು. ತಾಳಮದ್ದಳೆ ತಣ್ಣಗಾಗುತ್ತಿದೆಯೇ? ಎಂಬ ಆತಂಕವನ್ನು ನಿವಾರಿಸಿದ ಪ್ರಸಿದ್ಧರ ಕೂಟಕ್ಕೆ ಅವರು ಹಿರೇಮಣಿಯಾಗಿದ್ದರು. ಶೇಣಿ, ಸಾಮಗ, ಪೆರ್ಲ, ಕಾಂತರೈ, ಕುಂಬ್ಳೆ, ತೆಕ್ಕಟ್ಟೆಯಂಥವರು ಮೆರೆಯುತ್ತಿದ್ದ ಕಾಲದಲ್ಲೇ ಅದೇ ಸಾಲಿನಲ್ಲಿ ಕಿರಿಯನಾಗಿ ಪ್ರವೇಶ ಪಡೆದ ಜೋಶಿ ಅವರೆಲ್ಲರೆದುರು ನಿರ್ಭಿಡೆಯಿಂದ ಮುಖ್ಯಪಾತ್ರಗಳನ್ನು ನಿರ್ವಹಿಸಿ ಭರವಸೆ ಮೂಡಿಸಿದ್ದರು. ಹಿರಿಯ ತಲೆಮಾರಿನ ಸಮರ್ಥ ಉತ್ತರಾಧಿಕಾರಿಯಾಗಿ ಅರ್ಥಗಾರಿಕೆಯ ಹೊಸ ಮಟ್ಟೊಂದನ್ನು ರೂಪಿಸಿದರು.

ಯಕ್ಷಗಾನ ಪ್ರಸಂಗ-ಪ್ರಸಂಗಕರ್ತನ ಆಶಯ, ಪಾತ್ರ ಸೃಷ್ಟಿ, ಸಂವಹನ, ತರ್ಕ, ಭಾವಾಭಿವ್ಯಕ್ತಿ, ಅರ್ಥ ವಿಸ್ತಾರಗಳಿಂದ ಎದುರಾಳಿಯನ್ನು ತನ್ನ ಜೊತೆಗೆ ಕರೆದೊಯ್ಯುತ್ತಾ ಮಾತಿನ ಮಹಾರೂಪಕವನ್ನು ಅನಾವರಣಗೊಳಿಸುವ ಅಸಾಧಾರಣ ಪ್ರತಿಭೆ ಅವರದು. ತಾನು ವಹಿಸಿದ ಪಾತ್ರದ ಸುತ್ತ ಹೊಸ ಸಾಧ್ಯತೆಗಳ ಹುಡುಕಾಟ ನಡೆಸುವುದು ಜೋಶಿಯವರ ವೈಶಿಷ್ಟ್ಯ. ನವನವೀನ ಕಲ್ಪನೆ ಮತ್ತು ಹೊಸ ಅರ್ಥಗಳ ಅರಸುವಿಕೆಗೆ ಪ್ರಾಶಸ್ತ್ಯ ನೀಡುವ ಅವರಿಗೆ ತತ್ವಶಾಸ್ತ್ರದ ಅಧ್ಯಯನ, ತಾರ್ಕಿಕತೆಗಳು ಪಾತ್ರ ಸೃಷ್ಟಿಗೆ ಪೂರಕವಾದವು. ಕರ್ಣ, ಅರ್ಜುನ, ಕೌರವ, ಕೃಷ್ಣ, ಭೀಷ್ಮ, ವಾಲಿ, ಪರಶುರಾಮ, ರಾವಣ, ವೀರಮಣಿ, ಮಾಗಧ ಮೊದಲಾದ ಪಾತ್ರಗಳ ಅಂತರಾಳವನ್ನು ಕೆದಕಿ ಅರ್ಥವಿಸುವ ಅವರ ಮಾತುಗಾರಿಕೆಗೆ ವ್ಯಾಪಕ ಓದಿನ ಹಿನ್ನೆಲೆ ಇದೆ. ಪುರಾಣವಲ್ಲದೆ, ತತ್ವ, ಮೀಮಾಂಸೆ, ದರ್ಶನ ಶಾಸ್ತ್ರಗಳ ಅಭ್ಯಾಸ, ಲೋಹಿಯಾ, ಕಾರ್ಲ್‍ಮಾಕ್ರ್ಸ್, ಕೌಟಿಲ್ಯ, ಕುಮಾರಿಲಭಟ್ಟರನ್ನೂ ತಿಳಿದುಕೊಂಡಿರುವುದು ಅವರ ಅರ್ಥಗಾರಿಕೆಯಲ್ಲಿ ಸ್ಪಷ್ಟವಾಗುತ್ತದೆ. ಕುವೆಂಪು, ಕಾರಂತ, ಭೈರಪ್ಪ, ಅನಂತಮೂರ್ತಿಯವರ ಕಾದಂಬರಿಗಳ ಪ್ರಭಾವವೂ ಅಲ್ಲಲ್ಲಿ ಇಣುಕು ಹಾಕುತ್ತಿರುವುದು ಇತರ ಅರ್ಥಧಾರಿಗಳಿಂದ ಅವರನ್ನು ಪ್ರತ್ಯೇಕಿಸುವ ಅಂಶಗಳು.

ಬರಹಗಾರರಾಗಿ, ಚಿಂತಕರಾಗಿ ಜೋಶಿಯವರದು ಅಸೀಮ ಸಾಧನೆ. ಯಕ್ಷಗಾನ ಸಂಶೋಧಕ-ವಿಮರ್ಶಕರಾಗಿ ಅವರು ಮಾಡಿದ ಅಕ್ಷರ ಸೇವೆ ಇತರರಿಗೆ ಮಾದರಿ. ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನ ಪದಕೋಶ, ಭಾರತೀಯ ತತ್ತ್ವಶಾಸ್ತ್ರ, ತಾಳಮದ್ದಳೆ, ವಾಗರ್ಥ, ಮುಡಿ, ಮಂದಾರ ಕೇಶವ ಭಟ್ಟ (ಪರಿಚಯ-ತುಳು), ಗುರ್ತ(ತುಳು ಕವಿತೆಗಳು), ಪಂಡಿತ ಪೆರ್ಲ ಕೃಷ್ಣ ಭಟ್ಟ, ಯಕ್ಷಗಾನ ಸ್ಥಿತಿ-ಗತಿ, ತತ್ತ್ವ ಮನನ…. ಇತ್ಯಾದಿ ಅವರ ಪ್ರಕಟಿತ ಕೃತಿಗಳು. ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ ಸಂಶೋಧನಾ ಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಅವರಿಗೆ ಲಭಿಸಿದೆ. ಕಾಮರ್ಸ್ ಕಲಿಸುವ ಅಧ್ಯಾಪಕರೊಬ್ಬರು ಸಾಹಿತ್ಯದಲ್ಲಿ ಪಿ.ಎಚ್.ಡಿ. ಮಾಡಿರುವುದೊಂದು ಅಪರೂಪದ ವಿದ್ಯಮಾನ.

ಅರ್ಥಗಾರಿಕೆ: ಸ್ವರೂಪ ಸಮೀಕ್ಷೆ, ಯಕ್ಷಗಾನ ಚಿಂತನ, ಕುಕ್ಕಿಲ ಸಂಪುಟ ಅವರ ಸಂಪಾದಿತ ಗ್ರಂಥಗಳು. ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣಾ ಗ್ರಂಥ), ಯಕ್ಷಕರ್ದಮ (ಪದವೀಧರ ಯಕ್ಷಗಾನ ಸಮಿತಿ, ಮುಂಬೈ ಸಮ್ಮೇಳನ ಸಂಕಲನ), ಗಾನ ಕೋಗಿಲೆ (ಭಾಗವತ ದಾಮೋದರ ಮಂಡೆಚ್ಚ ಸಂಸ್ಮರಣಾ ಗ್ರಂಥ), ಸ್ವರ್ಣರೇಖೆ, ವಿಷನ್ ಟ್ವೆಂಟಿ ಫಸ್ಟ್ ಸೆಂಚುರಿ (ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನ), ಪೊಲಿ(ಕೆನರಾ ಜಿಲ್ಲೆ ಶತಮಾನ-ಸಂಪುಟ), ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣ ರಾವ್ ಸ್ಮೃತಿ ಗ್ರಂಥ), ರಂಗವೆಂಕಟ (ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣ ಗ್ರಂಥ, ದಿವಾಣ ಸಂಪದ (ದಿವಾಣ ಭೀಮ ಭಟ್ಟ ಸಂಸ್ಮರಣ ಗ್ರಂಥ), ಮೂಡಂಬೈಲು ಶಾಸ್ತ್ರಿ-75(ಅಭಿನಂದನ ಗ್ರಂಥ), ಶೇಣಿ ಪ್ರಸಂಗ, ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ-75 ಸಂಪುಟ) ಇವು ಇತರರೊಂದಿಗೆ ಸಂಪಾದಿಸಿದ ಗ್ರಂಥಗಳು. ನಾಡಿನ ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಕಾಣಿಸಿಕೊಂಡಿರುವ ಜೋಶಿಯವರ ಸ್ಪಂದನ (ಕರಾವಳಿ ಅಲೆ), ಸಂಸ್ಕೃತಿ ಸಮ್ಮುಖ (ಉದಯವಾಣಿ), ಜಿಜ್ಞಾಸೆ(ಉದಯವಾಣಿ), ಯಕ್ಷಪ್ರಶ್ನೆ (ಬಲ್ಲಿರೇನಯ್ಯ), ಅಂಕಣಗಳು ಅಪಾರ ಓದುಗರ ಪ್ರಶಂಸೆಗೆ ಪಾತ್ರವಾಗಿವೆ. ಅವರು ಬರೆದ ಬಿಡಿ ಬರಹಗಳು, ವ್ಯಕ್ತಿಚಿತ್ರ, ಕವಿತೆ, ವಿಚಾರಪತ್ರಗಳು ಅಸಂಖ್ಯ. ತಮ್ಮ ಲೇಖನಗಳಲ್ಲಿ ಹೇಳಬೇಕಾದುದನ್ನು ನೇರವಾಗಿ ಕೆಲವೇ ಪದಗಳಲ್ಲಿ ವ್ಯಕ್ತಗೊಳಿಸುವ ಕೌಶಲ್ಯ ಅವರದು.

ಭಾಸ್ಕರ ರೈ ಕುಕ್ಕುವಳ್ಳಿಹೊಸದಿಗಂತ ದಿನಾಂಕ 13-05-2017 ರಲ್ಲಿ ಪ್ರಕಟಿತ

error: Content is protected !!
Share This